ದುಬೈ: ಮ್ಯಾಥ್ಯೂ ವೇಡ್ ಮತ್ತು ಮಾರ್ಕಸ್ ಸ್ಟೋಯ್ನಿಸ್ ಅವರ ಅಬ್ಬರದ ಬ್ಯಾಟಿಂಗ್ ಹಾಗೂ ಡೇವಿಡ್ ವಾರ್ನರ್ ಅವರ ಜವಾಬ್ದಾರಿಯುತ ಇನ್ನಿಂಗ್ಸ್ ನೆರವಿನಿಂದ ಬಲಿಷ್ಠ ಪಾಕಿಸ್ತಾನದ ವಿರುದ್ಧ ಆಸ್ಟ್ರೇಲಿಯಾ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ 2ನೇ ಬಾರಿಗೆ ಫೈನಲ್ ಪ್ರವೇಶಿಸಿದೆ.
ಪಾಕಿಸ್ತಾನ ನೀಡಿದ್ದ 177 ರನ್ಗಳ ಬೃಹತ್ ಗುರಿಯನ್ನ 5 ವಿಕೆಟ್ ಕಳೆದುಕೊಂಡು ಇನ್ನು ಒಂದು ಓವರ್ ಇರುವಂತೆಯೇ ತಲುಪುವ ಮೂಲಕ ಪ್ರಶಸ್ತಿ ಸುತ್ತಿಗೆ ಎಂಟ್ರಿಕೊಟ್ಟಿದೆ.
ಡೇವಿಡ್ ವಾರ್ನರ್ 30 ಎಸೆತಗಳಲ್ಲಿ 49, ಮಿಚೆಲ್ ಮಾರ್ಷ್ 22 ಎಸೆತಗಳಲ್ಲಿ 28, ಮಾರ್ಕಸ್ ಸ್ಟೋಯ್ನಿಸ್ 31 ಎಸೆತಗಳಲ್ಲಿ ತಲಾ 2 ಬೌಂಡರಿ ಮತ್ತು ಸಿಕ್ಸರ್ಗಳ ಸಹಿತ ಅಜೇಯ 40 ಮತ್ತು ಮ್ಯಾಥ್ಯೂ ವೇಡ್ ಕೇವಲ 17 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 2 ಬೌಂಡರಿಗಳ ಸಹಿತ ಅಜೇಯ 41 ರನ್ಗಳಿಸಿ ಗೆಲುವಿನ ರೂವಾರಿಗಳಾದರು. ಈ ಮೂವರ ಆಟ ನಾಯಕ ಆ್ಯರೋನ್ ಫಿಂಚ್(0), ಸ್ಟೀವನ್ ಸ್ಮಿತ್(5) ಮತ್ತು ಗ್ಲೇನ್ ಮ್ಯಾಕ್ಸ್ವೆಲ್(7) ವೈಫಲ್ಯವನ್ನು ಮರೆಮಾಡಿತು.
ಕೊನೆಯ 5 ಓವರ್ಗಳಲ್ಲಿ ಗೆಲ್ಲಲು 62 ರನ್!
ಕೊನೆಯ 5 ಓವರ್ಗಳಲ್ಲಿ ಆಸ್ಟ್ರೇಲಿಯಾಗೆ ಗೆಲ್ಲಲು 62 ರನ್ಗಳ ಅವಶ್ಯಕತೆಯಿತ್ತು. ಕೆಟ್ಟ ಎಸೆತಗಳನ್ನು ದಂಡಿಸುತ್ತಾ ವಿಕೆಟ್ ಉಳಿಸಿಕೊಳ್ಳುತ್ತಾ ಸಾಗಿದ ವೇಡ್ ಮತ್ತು ಸ್ಟೋಯ್ನಿಸ್ ಜೋಡಿ 16ನೇ ಓವರ್ನಲ್ಲಿ12, 17 ನೇ ಓವರ್ನಲ್ಲಿ 13 ಹಾಗೂ 14ನೇ ಓವರ್ನಲ್ಲಿ 15 ರನ್ ಸೂರೆ ಗೈದಿತು. ಕೊನೆಯ 2 ಓವರ್ಗಳಲ್ಲಿ ಆಸ್ಟ್ರೇಲಿಯಾಕ್ಕೆ 22 ರನ್ಗಳು ಬೇಕಾಗಿದ್ದವು. ಮೊದಲ 2 ಎಸೆತಗಳಲ್ಲಿ 2 ರನ್ ಬಂದರೆ, 3ನೇ ಎಸೆತದಲ್ಲಿ ವೇಡ್ ನೀಡಿದ ಕ್ಯಾಚ್ಅನ್ನು ಹಸನ್ ಅಲಿ ಡ್ರಾಪ್ ಮಾಡಿದರು. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ವೇಡ್ ನಂತರದ 3 ಎಸೆತಗಳಲ್ಲಿ ಸಿಕ್ಸರ್ ಸಿಡಿಸಿ ಇನ್ನು 6 ಎಸೆತಗಳಿರುವಂತೆ ತಮ್ಮ ತಂಡವನ್ನು ಗೆಲುವಿನ ಗಡಿ ದಾಟಿಸಿದರು. ಹಸನ್ ಅಲಿ ಕ್ಯಾಚ್ ಡ್ರಾಪ್ ಮಾಡಿ ಪಾಕಿಸ್ತಾನಕ್ಕೆ ವಿಲನ್ ಆದರು.