ಇಸ್ಲಾಮಾಬಾದ್:24 ವರ್ಷಗಳ ಬಳಿಕ ಪಾಕಿಸ್ತಾನ ಪ್ರವಾಸ ಕೈಗೊಂಡಿರುವ ಆಸ್ಟ್ರೇಲಿಯಾ ತಂಡದ ಭಾಗವಾಗಿರುವುದಕ್ಕೆ ನನಗೆ ಹೆಮ್ಮೆಯಿದೆ ಎಂದಿರುವ ಸ್ಪಿನ್ನರ್ ನೇಥನ್ ಲಿಯಾನ್, ಟೆಸ್ಟ್ ಸರಣಿಯನ್ನು 3-0ರಲ್ಲಿ ಕ್ಲೀನ್ ಸ್ವೀಪ್ ಸಾಧಿಸುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.
ಆಸ್ಟ್ರೇಲಿಯಾ ಇತ್ತೀಚೆಗೆ ಆ್ಯಶಸ್ ಸರಣಿಯನ್ನು 4-0ರಿಂದ ಗೆದ್ದುಕೊಂಡಿತ್ತು. ಆದರೆ ಪಾಕಿಸ್ತಾನದಲ್ಲಿ ಆಸೀಸ್ ತಂಡ ವಿಭಿನ್ನ ಸವಾಲು ಎದುರಿಸುತ್ತಿದೆ. ಆದರೂ ಲಿಯಾನ್ ಪ್ರತಿ ಪಂದ್ಯವನ್ನೂ ಗೆಲ್ಲುವುದೇ ನಮ್ಮ ಗುರಿ ಎಂದಿದ್ದಾರೆ.
ಆಡುವ ಪ್ರತಿಯೊಂದು ಪಂದ್ಯವನ್ನು ಗೆಲ್ಲುವುದು ನನ್ನ ಮನಸ್ಥಿತಿಯಾಗಿದೆ. ನಾವು ಗೆಲ್ಲಲು ಎದುರು ನೋಡುತ್ತಿದ್ದೇವೆಯೇ ಹೊರತು ಡ್ರಾ ಅಥವಾ ಸೋಲಿನ ಕಡೆಯಲ್ಲ. ಪಾಕಿಸ್ತಾನದಲ್ಲಿ 3-0ಯಲ್ಲಿ ಟೆಸ್ಟ್ ಸರಣಿ ಗೆಲ್ಲುವುದೇ ನನ್ನ ಗುರಿ ಎಂದು ರಾವಲ್ಪಿಂಡಿಯಲ್ಲಿ ಶುಕ್ರವಾರ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ಲಿಯಾನ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
2009ರಲ್ಲಿ ಶ್ರೀಲಂಕಾ ಆಟಗಾರರಿದ್ದ ಬಸ್ ಮೇಲೆ ಪಾಕ್ ಉಗ್ರಗಾಮಿಗಳು ಬಾಂಬ್ ದಾಳಿ ಮಾಡಿದ ಮೇಲೆ ಯಾವುದೇ ದೊಡ್ಡ ರಾಷ್ಟ್ರಗಳು ಪಾಕಿಸ್ತಾನ ಪ್ರವಾಸದಿಂದ ದೂರ ಉಳಿದಿದ್ದವು. ಆದರೆ ಇತ್ತೀಚೆಗೆ ಅಂತಾರಾಷ್ಟ್ರೀಯ ತಂಡಗಳು ಪಾಕಿಸ್ತಾನ ಪ್ರವಾಸ ಕೈಗೊಳ್ಳುವುದನ್ನು ಪುನರಾರಂಭಿಸಿವೆ.
"ಪಾಕಿಸ್ತಾನಕ್ಕೆ ಹಲವು ವರ್ಷಗಳಿಂದ ಸಾಕಷ್ಟು ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಗಳನ್ನು ಆಯೋಜಿಸುವ ಅವಕಾಶ ಸಿಕ್ಕಿರಲಿಲ್ಲ. ಆದ್ದರಿಂದ ಇಲ್ಲಿ ಆಡಲು ಬಂದ ಮೊದಲ ಆಸ್ಟ್ರೇಲಿಯಾ ತಂಡದ ಭಾಗವಾಗುತ್ತಿರುವುದು ಬಹಳ ಹೆಮ್ಮೆಯ ಕ್ಷಣವಾಗಿದೆ. ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್, ಪ್ಯಾಟ್ ಕಮಿನ್ಸ್ ಮತ್ತು ಮಾರ್ನಸ್ ಲಾಬುಶೇನ್ ಅವರಂತಹ ಆಟಗಾರರನ್ನು ನೋಡುವುದು ಪಾಕಿಸ್ತಾನದ ಜನರಿಗೆ ಎಷ್ಟು ದೊಡ್ಡ ಅನುಭವ ಎಂಬುದರ ಕುರಿತು ನಾವು ಈಗಾಗಲೇ ಮಾತನಾಡಿದ್ದೇವೆ. ಈ ಆಟಗಾರರು ಇಲ್ಲಿಗೆ ಬಂದು ಇತರರಿಗೆ ಮಾದರಿಯಾಗಿದ್ದಾರೆ" ಎಂದು ಲಿಯಾನ್ ಹೇಳಿದ್ದಾರೆ.
ಇದನ್ನೂ ಓದಿ:ಸತತ 72 ಗಂಟೆ ಬ್ಯಾಟಿಂಗ್ ಅಭ್ಯಾಸ ಮಾಡಿ ದಾಖಲೆ ಬರೆದ ಮುಂಬೈ ಯುವಕ