ಸಿಡ್ನಿ: ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಟಿ20 ವಿಶ್ವಕಪ್ಗಾಗಿ ಆಸ್ಟ್ರೇಲಿಯಾ ತಂಡ ಇನ್ನೂ ವಿಕೆಟ್ ಕೀಪರ್ ಹುಡುಕುವುದರಲ್ಲಿದೆ ಎಂದು ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ಹೇಳಿದ್ದಾರೆ. ಜೊತೆಗೆ ತಾವು ಪ್ರಾಶಸ್ತ್ಯ ನೀಡಿದ್ದ ವಿಕೆಟ್ ಕೀಪರ್ರನ್ನು ಮುಂಬರುವ ವಿಂಡೀಸ್ ಪ್ರವಾಸಕ್ಕೆ ಆಯ್ಕೆ ಮಾಡಲಾಗಿಲ್ಲ ಎಂದು ತಿಳಿಸಿದ್ದಾರೆ.
"ಆಸ್ಟ್ರೇಲಿಯಾ ತಂಡದಲ್ಲಿ ವಿಕೆಟ್ ಕೀಪರ್ ಸ್ಥಾನ ಅತ್ಯಂತ ಹೆಚ್ಚು ನಿದ್ದೆಗೆಡಿಸಿರುವ ಸ್ಥಾನ" ಎಂದು ಪಾಂಟಿಂಗ್ cricket.com.au ಗೆ ತಿಳಿಸಿದ್ದಾರೆ.
"ಅವರ(ಆಸ್ಟ್ರೇಲಿಯಾ) ಒಟ್ಟಾರೆ ತಂಡದ ಆಯ್ಕೆಯ ಬಗ್ಗೆ ಉತ್ತರಿಸಲು ಅವರಿಗೆ ಇನ್ನೂ ಕೆಲವು ಪ್ರಶ್ನೆಗಳಿವೆ. ನನ್ನ ಪ್ರಕಾರ ದೊಡ್ಡ ಪ್ರಶ್ನೆಯೆಂದರೆ, ಯಾರು ಸ್ಟಂಪ್ ಹಿಂದೆ ಗ್ಲೌಸ್ ತೊಟ್ಟು ನಿಲ್ಲಲು ಹೋಗಲಿದ್ದಾರೆ? " ಎಂದು 2019ರ ಏಕದಿನ ವಿಶ್ವಕಪ್ನಲ್ಲಿ ಆಸೀಸ್ ತಂಡದ ಕೋಚ್ಗಳಲ್ಲಿ ಒಬ್ಬರಾಗಿದ್ದ ರಿಕಿ ಪಾಂಟಿಂಗ್ ಹೇಳಿದ್ದಾರೆ.
ಮುಂಬರುವ ಬೇಸಿಗೆ ಸರಣಿಗಳಿಗೆ ಅಲೆಕ್ಸ್ ಕ್ಯಾರಿ, ಮ್ಯಾಥ್ಯೂ ವೇಡ್ ಮತ್ತು ಜೋಶ್ ಫಿಲಿಪ್ಪೆ 23 ಸದಸ್ಯರ ತಂಡದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ಗಳಾಗಿ ಅವಕಾಶ ಪಡೆದಿದ್ದಾರೆ.
"ಅವರು (ಮ್ಯಾನೇಜ್ಮೆಂಟ್) ಕೀಪರ್ ಸ್ಥಾನಕ್ಕೆ ಕೆಲವರನ್ನು ಪ್ರಯತ್ನಿಸಿದ್ದಾರೆ, ವೇಡ್ ತಂಡದಲ್ಲಿದ್ದಾರೆ, ಫಿಲಿಪ್ಪೆ ಕೇವಲ ಬ್ಯಾಟ್ಸ್ಮನ್ ಆಗಿ ಆಡಿದ್ದಾರೆ, ಅಲೆಕ್ಸ್ ತಂಡದಲ್ಲಿ ಖಾಯಂ ಆಟಗಾರನಾಗಿಲ್ಲ, ಜೊತೆಗೆ ಅವರನ್ನು ವಿಭಿನ್ನ ಕ್ರಮಾಂಕದಲ್ಲಿ ಪ್ರಯತ್ನಿಸಲಾಗಿದೆ." ಎಂದು ತಂಡದಲ್ಲಿ ಖಾಯಂ ವಿಕೆಟ್ ಕೀಪರ್ ಕೊರತೆ ಬಗ್ಗೆ ಅಭಿಪ್ರಾಯ ಹೊರಹಾಕಿದ್ದಾರೆ.
ಆದರೆ 46 ವರ್ಷದ ಆಸೀಸ್ ಕ್ರಿಕೆಟರ್ ಪ್ರಕಾರ, ಜೋಶ್ ಇಂಗ್ಲಿಷ್ ತಂಡದಲ್ಲಿ ವಿಕೆಟ್ ಕೀಪರ್ಗೆ ಸರಿಹೊಂದುವ ಆಟಗಾರ. ಅವರು 23 ಸದಸ್ಯರ ತಂಡದಲ್ಲಿ ಇರಬೇಕಿತ್ತು ಎಂದು ತಿಳಿಸಿದ್ದಾರೆ.
"ಜೋಶ್ ಇಂಗ್ಲೀಸ್ ಕೂಡ ತಂಡದಲ್ಲಿ ಇರಬೇಕಿತ್ತು. ಬಿಗ್ಬ್ಯಾಶ್ನಲ್ಲಿ ಅವರು ಮಧ್ಯಮ ಕ್ರಮಾಂಕದಲ್ಲಿ ಆಡಿದ ರೀತಿ ನನಗೆ ತುಂಬಾ ಇಷ್ಟವಾಗಿದೆ, ಅವರು ಸ್ಪಿನ್ಗೆ ತುಂಬಾ ಚೆನ್ನಾಗಿ ಆಡಬಲ್ಲರು. ನೀವು ವಿಶ್ವಕಪ್ ಭಾರತ ಅಥವಾ ಯುಎಇನಲ್ಲಿ ನಡೆಯುತ್ತದೆ ಎಂದು ತಿಳಿದಿದ್ದರೆ, ಖಂಡಿತ ವಿಶ್ವಕಪ್ ತಂಡದಲ್ಲಿ ಆತನ ಹೆಸರನ್ನು ಸೇರಿಸಬೇಕು" ಎಂದು ಪಾಂಟಿಂಗ್ ಹೇಳಿದ್ದಾರೆ.