ಮುಂಬೈ:ತಾರಾ ಜೋಡಿ ಭಾರತೀಯ ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ಸುನೀಲ್ ಶೆಟ್ಟಿ ಅವರ ಮಗಳು ನಟಿ ಅಥಿಯಾ ಶೆಟ್ಟಿ ಅವರ ಮದುವೆಗೆ ಸಂಬಂಧಿಸಿದಂತೆ ಹೊಸ ಮಾಹಿತಿ ಹೊರಬಿದ್ದಿದೆ. ಮಾಹಿತಿಯ ಪ್ರಕಾರ, ಇಬ್ಬರ ವಿವಾಹಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಈ ವೇಳೆ, ಎಲ್ಲರಲ್ಲೂ ಉದ್ಭವಿಸುವ ಪ್ರಶ್ನೆ ಎಂದರೆ ಅನುಷ್ಕಾ - ವಿರಾಟ್‌ರಂತೆ ವಿದೇಶದಲ್ಲಿ ಸಪ್ತಪದಿ ತುಳಿಯುತ್ತಾರ ಅಥವಾ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಅವರಂತೆ ರಾಜಸ್ಥಾನದಲ್ಲಿ ರಾಯಲ್ ವೆಡ್ಡಿಂಗ್ ಮಾಡಿಕೊಳ್ಳುತ್ತಾರಾ ಎಂಬುದು. ಈ ಪ್ರಶ್ನೆಗೆ ಸದ್ಯ ಉತ್ತರ ದೊರೆತಿದ್ದು, ಮುಂಬೈನ ಖಂಡಾಲಾದಲ್ಲಿರುವ ಐಷಾರಾಮಿ ಬಂಗಲೆಯಲ್ಲಿ ಮಂಟಪವನ್ನು ಅಲಂಕರಿಸಲಾಗುತ್ತದೆ ಎನ್ನಲಾಗಿದೆ.
ಸುನಿಲ್ ಶೆಟ್ಟಿ ಮನೆಯಲ್ಲೇ ವಿವಾಹ:ಕೆಎಲ್ ರಾಹುಲ್ ಮತ್ತು ಅಥಿಯಾ ಅವರ ಆಪ್ತರು ಮತ್ತು ಕುಟುಂಬ ಸದಸ್ಯರೊಂದಿಗೆ ಸಮ್ಮುಖದಲ್ಲಿ ವಿವಾಹ ಆಗಲಿದ್ದಾರೆ ಎನ್ನಲಾಗಿದೆ. ಬಾಲಿವುಡ್ ಸೂಪರ್ ಸ್ಟಾರ್ ಸುನೀಲ್ ಶೆಟ್ಟಿ ಖಂಡಾಲಾದ ತಮ್ಮ ಐಷಾರಾಮಿ ಬಂಗಲೆಯ ಅಂಗಳದಲ್ಲಿ ತಮ್ಮ ಪ್ರೀತಿಯ ಮಗಳು ಅಥಿಯಾಳನ್ನು ವಿವಾಹ ಮಾಡಿ ಕೊಡಲಿದ್ದಾರೆ.
ಜನವರಿ 20ಕ್ಕೆ ವಿವಾಹ:ಕೆ ಎಲ್ ರಾಹುಲ್ ಮತ್ತು ಅಥಿಯಾ ಅವರ ಮನೆಯವರು ವಿವಾಹ ದಿನಾಂಕವನ್ನು ಎಲ್ಲೂ ದೃಢಪಡಿಸಿಲ್ಲವಾದರೂ, ಜನವರಿ 20 ರಂದು ತಾರಾ ಜೋಡಿ ಸಪ್ತಪದಿ ತುಳಿಯಲಿದ್ದಾರೆ ಎಂದು ಸಂಬಂಧಿಗಳ ಆಪ್ತ ಮೂಲಗಳಿಂದ ತಿಳಿದು ಬಂದಿರುವ ಮಾಹಿತಿ. ವಿವಾಹಕ್ಕೆ ಆಪ್ತರು ಮತ್ತು ಕೆಲ ತಾರೆಯರಿಗೆ ಮಾತ್ರ ಆಹ್ವಾನ ಇರಲಿದೆ ಎಂದು ಹೇಳಲಾಗಿದೆ.
ಅದ್ಧೂರಿ ಆರತಕ್ಷತೆ:ಮದುವೆಯು ಆತ್ಮೀಯ ಸಂಬಂಧದವರನ್ನು ಮಾತ್ರ ಕರೆಯಾಲಾಗುವುದು ಎಂದು ಹೇಳಲಾಗಿದೆ. ಆದರೆ, ಸುನಿಲ್ ಶೆಟ್ಟಿ ಮತ್ತು ಕನ್ನಡಿಗ ಕೆ ಎಲ್ ರಾಹುಲ್ ಅವರ ಕುಟುಂಬ ನಂತರ ಮುಂಬೈನಲ್ಲಿ ಅದ್ಧೂರಿ ಆರತಕ್ಷತೆಗೆ ಯೋಜಿಸಲಿದೆ ಎನ್ನಲಾಗಿದೆ. ಏಪ್ರಿಲ್‌ನಲ್ಲಿ ಅಥಿಯಾ ಮತ್ತು ರಾಹುಲ್ ಅವರ ಆರತಕ್ಷತೆ ಅದ್ಧೂರಿಯಾಗಿ ಮಾಡಲಾಗುವುದು ಈ ಕಾರ್ಯುಕ್ರಮಕ್ಕೆ ಕುಟುಂಬದ ಎಲ್ಲ ಸದಸ್ಯರು, ಸುನಿಲ್ ಶೆಟ್ಟಿ ಮತ್ತು ಅಥಿಯಾ ಅವರ ಸಿನಿ ಕ್ಷೇತ್ರದ ಗೆಳೆಯರು ಮತ್ತು ರಾಹುಲ್ ಅವರ ಕ್ರೀಡಾ ಕ್ಷೇತ್ರ ಸ್ನೇಹಿತರನ್ನು ಆಹ್ವಾನಿಸಲಾಗುವುದು ಎಂದು ಹೇಳಲಾಗಿದೆ.