ಹ್ಯಾಂಗ್‌ಝೌ (ಚೀನಾ): ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2023ರಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡ ದೇಶದ ಧ್ವಜವನ್ನು ಮುಗಿಲೆತ್ತರಕ್ಕೆ ಹಾರಿಸಿದೆ. ಶ್ರೀಲಂಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದ್ದು, ಐತಿಹಾಸಿಕ ಚಿನ್ನದ ಪದಕ ಗೆದ್ದುಕೊಂಡಿದೆ. ಅಂತಿಮ ಪಂದ್ಯದಲ್ಲಿ ಸ್ಮೃತಿ ಮಂಧಾನ ಅತ್ಯುತ್ತಮ ಇನ್ನಿಂಗ್ಸ್ ಆಡಿದ್ದರು. ಅಷ್ಟೇ ಅಲ್ಲ ಚೀನಾದಲ್ಲಿ ಟೀಂ ಇಂಡಿಯಾದ ಅಭಿಮಾನಿಗಳಲ್ಲಿ ಭಾರಿ ಕ್ರೇಜ್ ಹುಟ್ಟು ಹಾಕಿದೆ. ಫೈನಲ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಸ್ಮೃತಿ ಮಂಧಾನ ಅವರನ್ನು ಚೀನಾ ಕ್ರಿಕೆಟ್ ಅಭಿಮಾನಿಯೊಬ್ಬ ‘ದೇವತೆ’ ಎಂದು ಬಣ್ಣಿಸಿದ್ದಾನೆ. ತನ್ನ ಕೈಯಲ್ಲಿ ಆತ 'ಮಂಧಾನ ದಿ ಗಾಡೆಸ್' ಎಂಬ ಪೋಸ್ಟರ್ ಹಿಡಿದುಕೊಂಡಿದ್ದ. ಈ ಚೈನೀಸ್ ಅಭಿಮಾನಿಯ ಹೆಸರು ವೀ ಝೆನ್ಯು.
ಮಂಧಾನ ಅವರ ದೊಡ್ಡ ಅಭಿಮಾನಿ: ಭೌಗೋಳಿಕ ಶಾಸ್ತ್ರ ವಿದ್ಯಾರ್ಥಿಯಾಗಿರುವ ವೀ, ಸ್ಮೃತಿ ಮಂಧಾನಾ ಅವರ ದೊಡ್ಡ ಅಭಿಮಾನಿಯಂತೆ. ಬೀಜಿಂಗ್‌ನಿಂದ 100 ಯುವಾನ್ ಖರ್ಚು ಮಾಡಿ ಮಂಧಾನ ಆಟ ವೀಕ್ಷಿಸಲು ಬಂದಿದ್ದನು. ಚೀನಾದಲ್ಲಿ ಕ್ರಿಕೆಟ್ ವಿಸ್ತರಿಸುವ ಪ್ರಯತ್ನಗಳು ಬಹಳ ಸಮಯದಿಂದ ನಡೆಯುತ್ತಿವೆ. ಆದರೆ ಇಲ್ಲಿಯವರೆಗೆ ಯಾವುದೇ ಗಮನಾರ್ಹ ಪ್ರಗತಿ ಕಂಡುಬಂದಿಲ್ಲ. ಆದರೆ, ಇದರ ಹೊರತಾಗಿ ಟೀಂ ಇಂಡಿಯಾ ಅಭಿಮಾನಿಗಳ ಸಂಖ್ಯೆ ಆ ದೇಶದಲ್ಲಿ ಸಾಕಷ್ಟಿದೆ.