ಕರ್ನಾಟಕ

karnataka

ETV Bharat / sports

Asian Games T20 cricket: 'ಚಿನ್ನ'ಕ್ಕಾಗಿ ಭಾರತ - ಆಫ್ಘನ್​​ ಮುಖಾಮುಖಿ... ಪಂದ್ಯಕ್ಕೆ ಮಳೆ ಅಡ್ಡಿ - ಕ್ರಿಕೆಟ್‌ ಫೈನಲ್‌ನಲ್ಲಿ ಭಾರತ ಮತ್ತು ಅಫ್ಗಾನಿಸ್ತಾನ

Asian Games: ಏಷ್ಯನ್ ಗೇಮ್ಸ್ ಮಹಿಳೆಯರ ಕ್ರಿಕೆಟ್ ವಿಭಾಗದಲ್ಲಿ ಭಾರತ ತಂಡ ಈಗಾಗಲೇ ಒಂದು ಚಿನ್ನದ ಪದಕ ಗೆದ್ದಿದೆ. ಇದೀಗ ಪುರುಷರ ತಂಡ ಚಿನ್ನದ ಪದಕಕ್ಕಾಗಿ ಅಫ್ಘಾನಿಸ್ತಾನ ತಂಡವನ್ನು ಎದುರಿಸುತ್ತಿದೆ.

Asian Games T20 cricket
Asian Games T20 cricket

By ETV Bharat Karnataka Team

Published : Oct 7, 2023, 12:11 PM IST

Updated : Oct 7, 2023, 2:24 PM IST

ಹಾಂಗ್‌ಝೌ (ಚೀನಾ):ಏಷ್ಯನ್ ಕ್ರೀಡಾಕೂಟದ ಟಿ-20 ಕ್ರಿಕೆಟ್‌ ಫೈನಲ್‌ನಲ್ಲಿ ಭಾರತ ಮತ್ತು ಅಪ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಚಿನ್ನದ ಪದಕಕ್ಕೆ ಕೊರಳೊಡ್ಡಲಿದೆ. ಫೈನಲ್​ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್​ಗೆ ಇಳಿದ ಆಫ್ಘನ್ ತಂಡ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಆಘಾತಕ್ಕೀಡಾಯಿತು.

ಆರಂಭಿಕ ಜುಬೈದ್ ಅಕ್ಬರಿ 5 ರನ್ ಗಳಿಸಿದ್ದಾಗ ಶಿವಂ ದುಬೆ ಎಸೆತದಲ್ಲಿ ವಿಕೆಟ್ ಕೊಟ್ಟರು. ಬಳಿಕ ಮೊಹಮ್ಮದ ಶಹಜಾದ್ ಕೂಡ 4 ರನ್ ಗಳಿಸಿ ಅರ್ಶದೀಪ್​ ಸಿಂಗ್​ ಎಸೆತದಲ್ಲಿ ಔಟಾದರು. ನೂರ್ ಅಲಿ ಜಡ್ರಾನ್ 1 ರನ್ ಗಳಿಸಿ ರನೌಟ್ ಆದರು. ಈ ವೇಳ ಆಫ್ಘನ್ ತಂಡದ ಮೊತ್ತ 12 ಆಗುವಷ್ಟರಲ್ಲಿ ಪ್ರಮುಖ ಮೂರು ಬ್ಯಾಟರ್​ಗಳು ಪೆವಿಲಿಯನ್ ಸೇರಿದರು. ಅಲ್ಪ ಮೊತ್ತಕ್ಕೆ ಕುಸಿಯುವ ಆತಂಕದಲ್ಲಿದ್ದಾಗ ಕ್ರೀಸ್​ಗೆ ಬಂದ ಶಾಹಿದುಲ್ಹಾ ಗಟ್ಟಿಯಾಗಿ ನಿಂತು ತಂಡದ ಮೊತ್ತ ಏರಿಸಿದರು. ಇನ್ನೊಂದೆಡೆ ಅಫ್ಸರ್ ಝಝೈ 15 ಮತ್ತು ಕರೀಂ ಜನತ್ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

18.2 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು ಆಫ್ಘನ್ 122 ರನ್ ಕಲೆ ಹಾಕಿದೆ. ಶಾಹಿದುಲ್ಹಾ 49 ಮತ್ತು ಗುಲ್ಬದಿನ್ 27 ರನ್ ಗಳಿಸಿ ಕ್ರೀಸ್​ನಲ್ಲಿದ್ದಾರೆ. ಸದ್ಯ ಮಳೆಯಿಂದ ಪಂದ್ಯ ಸ್ಥಗಿತಗೊಂಡಿದೆ. ಒಂದು ವೇಳೆ ಪಂದ್ಯ ರದ್ದಾದರೆ ರ‍್ಯಾಂಕ್​ ಆಧಾರದ ಮೇಲೆ ಭಾರತಕ್ಕೆ ಚಿನ್ನದ ಪದಕ ಸಿಗಲಿದೆ. ಕರಾರುವಕ್ಕಾಗಿ ಬೌಲಿಂಗ್ ಮಾಡಿದ ಭಾರತದ ಬೌಲರ್​ಗಳು, ಆಫ್ಘನ್ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದರು. ಅರ್ಶದೀಪ್ ಸಿಂಗ್, ಶಿವಂ ದುಬೆ, ಶಹಬಾಜ್ ಅಹಮದ್, ರವಿ ಬಿಷ್ನೋಯ್ ತಲಾ 1 ವಿಕೆಟ್ ಕಬಳಿಸಿದರು.

ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶದ ತಂಡವನ್ನು ಸೋಲಿಸಿ ರುತುರಾಜ್ ಗಾಯಕ್​ವಾಡ್ ತಂಡ ಫೈನಲ್​ಗೆ ಲಗ್ಗೆ ಇಟ್ಟಿತು. ಇನ್ನೊಂದೆಡೆ ಪಾಕ್ ತಂಡವನ್ನು ಬಗ್ಗುಬಡಿದು ಅಫ್ಘಾನಿಸ್ತಾನ ಪ್ರಶಸ್ತಿ ಹಂತಕ್ಕೆ ಬಂದಿದೆ.

ಸೆಮಿಫೈನಲ್​ನಲ್ಲಿ ಬಾಂಗ್ಲಾವನ್ನು ಕೇವಲ 96 ರನ್​ಗಳಿಗೆ ಟೀಂ ಇಂಡಿಯಾ ಕಟ್ಟಿ ಹಾಕಿ, ಅನಾಯಾಸವಾಗಿ ಜಯ ದಾಖಲಿಸಿತ್ತು.

ಭಾರತ ತಂಡ: ರುತುರಾಜ್ ಗಾಯಕ್​ವಾಡ್ (ನಾಯಕ), ಅರ್ಶದೀಪ್ ಸಿಂಗ್, ಶಿವಂ ದುಬೆ, ಯಶಸ್ವಿ ಜೈಸ್ವಾಲ್, ರವಿ ಬಿಷ್ಟೋಯ್, ಶಹಬಾಜ್ ಅಹಮದ್, ಜಿತೇಶ್ ಶರ್ಮಾ, ರಿಂಕು ಸಿಂಗ್, ತಿಲಕ್ ವರ್ಮಾ, ವಾಷಿಂಗ್ಟನ್ ಸುಂದರ್, ಆರ್ ಸಾಯಿ ಕಿಶೋರ್.

ಇದನ್ನೂ ಓದಿ: ಏಷ್ಯನ್ ಗೇಮ್ಸ್​ನಲ್ಲಿ ಭಾರತದ ಪದಕಗಳ ಶತಕದ ಸಾಧನೆ... ಕಬಡ್ಡಿಯಲ್ಲಿ ಭಾರತ ಮಹಿಳಾ ತಂಡಕ್ಕೆ ಚಿನ್ನದ ಗರಿ..

Last Updated : Oct 7, 2023, 2:24 PM IST

ABOUT THE AUTHOR

...view details