ಹ್ಯಾಂಗ್‌ಝೌ (ಚೀನಾ): ಏಷ್ಯನ್ ಗೇಮ್ಸ್ ಕ್ರಿಕೆಟ್ ಟಿ 20 ಸೆಮಿಫೈನಲ್ನಲ್ಲಿ ಬಾಂಗ್ಲಾ ವಿರುದ್ಧ ಟೀಂ ಇಂಡಿಯಾ ಅನಾಯಾಸವಾಗಿ ಜಯಿಸಿ ಫೈನಲ್ಗೆ ಲಗ್ಗೆ ಇಟ್ಟಿತು. ಭಾರತದ ಮಾರಕ ಬೌಲಿಂಗ್ ದಾಳಿಗೆ ಬಾಂಗ್ಲಾ ತತ್ತರಿಸಿ ಶರಣಾಯಿತು. ಟೀಂ ಇಂಡಿಯಾ ಫೈನಲ್ ಪ್ರವೇಶಿಸುವ ಜೊತೆಗೆ ಏಷ್ಯನ್ ಗೇಮ್ಸ್‌ನಲ್ಲಿ ಪದಕ ಖಚಿತ ಪಡಿಸಿಕೊಂಡಿತು.
ಇಂದು ನಡೆದ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಭಾರತ ಮೊದಲು ಬೌಲಿಂಗ್ ಆಯ್ದುಕೊಂಡಿತು. ಇದರಿಂದಾಗಿ ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಬಾಂಗ್ಲಾ ಆಟಗಾರರು ಟೀಂ ಇಂಡಿಯಾದ ಕರಾರುವಕ್ಕ ಬೌಲಿಂಗ್ ಎದುರಿಸಲಾಗದೆ ಕ್ರೀಸ್ಗೆ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು. 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 96 ರನ್ ಗಳಿಸಲಷ್ಟೇ ಬಾಂಗ್ಲಾ ಶಕ್ತವಾಯಿತು.
ಬಾಂಗ್ಲಾ ಪರ ಓಪನರ್ ಪರ್ವೇಜ್ ಹುಸೇನ್ (23) ರನ್ ಮತ್ತು ವಿಕೇಟ್ ಕೀಪರ್ ಜಾಕೀರ್ ಅಲಿ 29 ರನ್ ಹಾಗೂ ರಕಿಬುಲ್ ಹಸನ್ 14 ರನ್ ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರರು ಎರಡಂಕಿ ದಾಟಲಿಲ್ಲ. ವಾಷಿಂಗ್ಟನ್ ಸುಂದರ್ 2, ಸಾಯಿ ಕಿಶೋರ್ 3, ಅರ್ಶದೀಪ್ ಸಿಂಗ್, ತಿಲಕ್ ವರ್ಮಾ, ರವಿ ಬಿಸ್ನೋಯ್ ಮತ್ತು ಶಹಬಾಜ್ ಅಹಮದ್ ತಲಾ 1 ವಿಕೆಟ್ ಕಬಳಿಸಿ ಬಾಂಗ್ಲಾ ಆಟಗಾರರನ್ನು ಕಟ್ಟಿ ಹಾಕಿದರು. ಇದರಿಂದಾಗಿ ಬಾಂಗ್ಲಾ ಸ್ಕೋರ್ ಶತಕದ ಗಡಿಯನ್ನು ದಾಟಲಿಲ್ಲ
ಬಾಂಗ್ಲಾ ನೀಡಿದ 96 ರನ್ಗಳ ಸುಲಭ ಗುರಿಯನ್ನು ರುತುರಾಜ್ ಗಾಯಕ್ವಾಡ್ ಪಡೆ 9.2 ಓವರ್ಗಳಲ್ಲೇ ತಲುಪಿತು. ಆರಂಭಿಕ ಆಟಗಾರ ಯಶಸ್ವಿ ಜೈಪಾಲ್ ಸೊನ್ನೆ ಸುತ್ತಿ ಪೆವಿಲಿಯನ್ ಸೇರಿದರು. ಬಳಿಕ ನಾಯಕ ರುತುರಾಜ್ ಗಾಯಕ್ವಾಡ್ 40 (26 ಎಸೆತ 3 ಸಿಕ್ಸ್, 4 ಬೌಂಡರಿ) ಮತ್ತು ತಿಲಕ್ ವರ್ಮಾ (26 ಎಸೆತ, 6 ಸಿಕ್ಸ್, 2 ಬೌಂಡರಿ) 55 ರನ್ ಜೊತೆಯಾಟದಿಂದ ಟೀಂ ಇಂಡಿಯಾ ಗೆಲುವು ಸಾಧಿಸಿತು.
ಟೀಂ ಇಂಡಿಯಾಗೆ ಮತ್ತೊಂದು ಪದಕ ಖಚಿತ: ಏಷ್ಯನ್ ಗೇಮ್ಸ್ ಟಿ 20 ಕ್ರಿಕೆಟ್ನಲ್ಲಿ ಭಾರತ ಪುರುಷರ ತಂಡ ಫೈನಲ್ ತಲುಪಿದ್ದರಿಂದ ದೇಶಕ್ಕೆ ಮತ್ತೊಂದು ಪದಕ ಖಚಿತವಾದಂತಾಗಿದೆ. ಫೈನಲ್ಗೆ ಗೆದ್ದರೆ ಚಿನ್ನ, ಒಂದು ವೇಳೆ ಎಡವಿದರೆ ಬೆಳ್ಳಿ ಪದಕ ಸಿಗಲಿದೆ. ಈಗಾಗಲೇ ಮಹಿಳೆಯರ ತಂಡ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದು ಇತಿಹಾಸ ರಚಿಸಿದೆ. ಇದೀಗ ರುತುರಾಜ್ ಗಾಯಕ್ವಾಡ್ ಪಡೆ ದಾಖಲೆ ಬರೆಯುವ ಹಂತಕ್ಕೆ ತಲುಪಿದೆ.