ಹ್ಯಾಂಗ್‌ಝೌ (ಚೀನಾ):2023ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. ಸಪ್ಟೆಂಬರ್ 24ರಂದು (ಭಾನುವಾರ) ಈ ಎರಡು ತಂಡಗಳ ನಡುವೆ ಫೈನಲ್ ಪ್ರವೇಶಕ್ಕಾಗಿ ಹೋರಾಟ ನಡೆಯಲಿದೆ. ಈ ಎರಡು ತಂಡಗಳ ನಡುವಿನ ಪಂದ್ಯ ಭಾರತೀಯ ಕಾಲಮಾನ ಬೆಳಗ್ಗೆ 6:30ಕ್ಕೆ ಆರಂಭವಾಗಲಿದೆ. ಈ ಪಂದ್ಯವು ಹ್ಯಾಂಗ್‌ಝೌನ ಪಿಂಗ್‌ಫೆಂಗ್ ಕ್ಯಾಂಪಸ್ ಕ್ರಿಕೆಟ್ ಫೀಲ್ಡ್‌ನಲ್ಲಿ ನಡೆಯಲಿದೆ. ಭಾರತ ಮತ್ತು ಬಾಂಗ್ಲಾದೇಶ ನಡುವಿನ ಕೊನೆಯ ಸರಣಿಯು ಟೈ ಆಗಿದ್ದರಿಂದ ಬಾಂಗ್ಲಾದೇಶ ತಂಡವು ಭಾರತಕ್ಕೆ ಕಠಿಣ ಪೈಪೋಟಿ ನೀಡಬಹುದು.
ಏಷ್ಯನ್ ಗೇಮ್ಸ್‌ನ ಮೊದಲ ಪಂದ್ಯದಲ್ಲಿ ಭಾರತ ತಂಡ ಮಲೇಷ್ಯಾವನ್ನು ಎದುರಿಸಿತ್ತು. ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದು, ಪಂದ್ಯ ರದ್ದಾಗಿದೆ. ಇದಾದ ಬಳಿಕ ಭಾರತ ತಂಡಕ್ಕೆ ಶ್ರೇಯಾಂಕದ ಆಧಾರದಲ್ಲಿ ಸೆಮಿಫೈನಲ್‌ಗೆ ನೇರ ಪ್ರವೇಶ ನೀಡಲಾಯಿತು. ಈ ಪಂದ್ಯದಲ್ಲಿ ಮೊದಲು ಆಡಿದ ಭಾರತ ತಂಡ 15 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 173 ರನ್ ಗಳಿಸಿತ್ತು. ಈಗ ಭಾರತ ತಂಡವು ಬಾಂಗ್ಲಾದೇಶವನ್ನು ಸೋಲಿಸಿ 2023ರ ಏಷ್ಯನ್ ಗೇಮ್ಸ್‌ನ ಫೈನಲ್‌ಗೆ ಪ್ರವೇಶಿಸಲು ಬಯಸುತ್ತದೆ.
ಬಾಂಗ್ಲಾದೇಶ ವಿರುದ್ಧದ ಈ ದೊಡ್ಡ ಪಂದ್ಯದಲ್ಲಿ ಸ್ಮೃತಿ ಮಂಧಾನ ಮತ್ತು ಶೆಫಾಲಿ ವರ್ಮಾ ತಂಡಕ್ಕೆ ಉತ್ತಮ ಆರಂಭ ನೀಡುವ ನಿರೀಕ್ಷೆಯಿದೆ. ಮೊದಲ ಪಂದ್ಯದಲ್ಲಿ ಮಂಧಾನ 27 ರನ್ ಗಳಿಸಿದ್ದರೆ, ಶೆಫಾಲಿ 39 ಎಸೆತಗಳಲ್ಲಿ 4 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ 67 ರನ್ ಗಳಿಸಿದ್ದರು. ಮಧ್ಯಮ ಕ್ರಮಾಂಕದಲ್ಲಿ ಭಾರತದ ರನ್ ರೇಟ್ ಹೆಚ್ಚಿಸುವ ಜವಾಬ್ದಾರಿ ಜೆಮಿಮಾ ರೋಡ್ರಿಗಸ್ ಅವರ ಹೆಗಲ ಮೇಲಿರುತ್ತದೆ. ಮಲೇಷ್ಯಾ ವಿರುದ್ಧದ ಪಂದ್ಯದಲ್ಲಿ ಜೆಮಿಮಾ 29 ಎಸೆತಗಳಲ್ಲಿ 6 ಬೌಂಡರಿಗಳ ನೆರವಿನಿಂದ 47 ರನ್ ಗಳಿಸಿದ್ದರು. ರಿಚಾ ಘೋಷ್ ಅವರಿಂದ ತಂಡವು ಅತ್ಯುತ್ತಮ ಫಿನಿಶಿಂಗ್ ಅನ್ನು ನಿರೀಕ್ಷಿಸುತ್ತದೆ. ಅವರು ಮಲೇಷ್ಯಾ ವಿರುದ್ಧ 7 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್‌ನೊಂದಿಗೆ 21 ರನ್ ಗಳಿಸಿದರು. ರಿಚಾ ತಮ್ಮ ದೊಡ್ಡ ಹೊಡೆತಗಳಿಗೆ ಹೆಸರುವಾಸಿಯಾಗಿದ್ದಾರೆ.