ಮುಂಬೈ: ಚೀನಾದ ಹ್ಯಾಂಗ್‌ಝೌನಲ್ಲಿ ಶನಿವಾರದಿಂದ ಏಷ್ಯನ್ ಕ್ರೀಡಾಕೂಟ ಆರಂಭವಾಗಲಿದ್ದು, ಭಾರತೀಯ ಆಟಗಾರರ ಮೇಲೆ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಏಷ್ಯನ್ ಗೇಮ್ಸ್ ಅನ್ನೋದು ಒಲಿಂಪಿಕ್ಸ್ ನಂತರ ಅತಿ ದೊಡ್ಡ ಕ್ರೀಡಾಕೂಟವಾಗಿದೆ. ಈ ಕೂಟದಲ್ಲಿ ಭಾರತ ಸೇರಿದಂತೆ 45 ದೇಶಗಳು ಸ್ಪರ್ಧಿಸುತ್ತಿವೆ. ಈಗಾಗಲೇ ವಾಲಿಬಾಲ್ ಮತ್ತು ಕ್ರಿಕೆಟ್ ಪಂದ್ಯ ಪ್ರಾರಂಭವಾಗಿದೆ. ಭಾರತ ಕ್ರಿಕೆಟ್‌ನಲ್ಲಿಯೂ ಸ್ಪರ್ಧಿಸುತ್ತಿದೆ.
ಹ್ಯಾಂಗ್‌ಝೌ ನಗರ ಏಷ್ಯನ್ ಕ್ರೀಡಾಕೂಟ ಆಯೋಜಿಸುತ್ತಿದೆ. ಸ್ಕ್ವಾಷ್, ಬ್ಯಾಡ್ಮಿಂಟನ್, ಟೆನ್ನಿಸ್‌ನಂತಹ ಇತರ ಆಟಗಳನ್ನು ಹೆಚ್ಚಾಗಿ ಈ ನಗರದಲ್ಲಿ ಆಡಿಸಲಾಗುತ್ತದೆ. ಇನ್ನೂ ಐದು ನಗರಗಳಲ್ಲಿ ಕೆಲವು ಪಂದ್ಯಗಳು ನಡೆಯಲಿವೆ. ವಿವಿಧ ದೇಶಗಳ 11 ಸಾವಿರಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಲಿದ್ದಾರೆ. 1,000ಕ್ಕೂ ಹೆಚ್ಚು ಪದಕಗಳನ್ನು ಜಯಸಲಿದ್ದಾರೆ.
ಭಾರತ ಈ ಸಲದ ಗೇಮ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ 100 ಪದಕ ಗೆಲ್ಲುವ ಗುರಿ ಹೊಂದಿದೆ. 655 ಸದಸ್ಯರ ಬಲಿಷ್ಠ ತಂಡವನ್ನು ಭಾರತ ಅಖಾಡಕ್ಕಿಳಿಸಲಿದೆ. ದೇಶದ ಆಟಗಾರರು 41 ಕ್ರೀಡೆಗಳಲ್ಲಿ ಸ್ಪರ್ಧಿಸಲಿದ್ದಾರೆ. ಅಥ್ಲೆಟಿಕ್ಸ್ ತಂಡದಲ್ಲಿ 68 ಮಂದಿ ಸ್ಪರ್ಧಿಗಳಿದ್ದಾರೆ.
2018ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತ 15 ಚಿನ್ನ, 24 ಬೆಳ್ಳಿ ಸೇರಿದಂತೆ 69 ಪದಕಗಳನ್ನು ಗೆದ್ದುಕೊಂಡಿತ್ತು. ಒಟ್ಟು 108 ಗೆಲುವುಗಳನ್ನು ದಾಖಲಿಸಿತ್ತು. ಇದು ಏಷ್ಯನ್ ಕ್ರೀಡೆಯಲ್ಲಿ ಭಾರತದ ಅತ್ಯುತ್ತಮ ಸಾಧನೆಯಾಗಿದೆ. ಇದೀಗ ಆಟಗಾರರ ಗುಣಮಟ್ಟ ಹೆಚ್ಚಿದೆ. ಈ ಬಾರಿ ಪದಕಗಳ ಸಂಖ್ಯೆ ಶತಕ ಬಾರಿಸುವುದು ಅಸಾಧ್ಯವೇನಲ್ಲ ಎಂಬ ನಿರೀಕ್ಷೆ ಭಾರತದ್ದಾಗಿದೆ.
ಯಾರ ಮೇಲೆ ಪದಕ ನಿರೀಕ್ಷೆ?: ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ಜಾವೆಲಿನ್ ಪಟು ನೀರಜ್ ಚೋಪ್ರಾ (ಏಷ್ಯನ್ ಗೇಮ್ಸ್ 2023 ನೀರಜ್ ಚೋಪ್ರಾ) ಚಿನ್ನ ಗೆಲ್ಲುತ್ತಾರೆ ಎಂದು ಎಲ್ಲರೂ ಭಾವಿಸಿದ್ದಾರೆ. ಇವರನ್ನು ಹೊರತುಪಡಿಸಿ ಮೀರಾಬಾಯಿ ಚಾನು (ವೇಟ್‌ಲಿಫ್ಟಿಂಗ್), ನಿಖತ್ ಜರೀನ್ (ಬಾಕ್ಸಿಂಗ್), ಸಾತ್ವಿಕ್ ಸಾಯಿರಾಜ್-ಚಿರಾಗ್ ಶೆಟ್ಟಿ (ಬ್ಯಾಡ್ಮಿಂಟನ್ ಡಬಲ್ಸ್), ಜ್ಯೋತಿ ಸುರೇಖಾ (ಆರ್ಚರಿ), ತೇಜಸ್ವಿನ್ ಶಂಕರ್ (ಡೆಕಾಥ್ಲಾನ್), ರುದ್ರಾಂಕ್ಷ್ ಪಾಟೀಲ್ (ಶೂಟಿಂಗ್), ಪಾರುಲ್ ಚೌಧರಿ (3000 ಮೀ ಸ್ಟೀಪಲ್ ಚೇಸ್), ರೋಹನ್ ಬೋಪಣ್ಣ (ಟೆನಿಸ್ ಡಬಲ್ಸ್), ಜ್ಯೋತಿ ಯರ್ರಾಜಿ (100 ಮೀ ಹರ್ಡಲ್ಸ್), ಪುರುಷರ ಹಾಕಿ ತಂಡ, ಭಾರತೀಯ ಪುರುಷರ ಮತ್ತು ಮಹಿಳಾ ಕ್ರಿಕೆಟ್ ತಂಡಗಳು ಪದಕ ಗೆಲ್ಲುವ ನೆಚ್ಚಿನ ತಂಡಗಳಾಗಿವೆ.
ಟಾಪ್-5ರಲ್ಲಿ ಭಾರತ: ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಭಾರತ ಟಾಪ್-5ರಲ್ಲಿದೆ. 1951ರಲ್ಲಿ ಮೊದಲ ಏಷ್ಯಾಡ್ ಆಯೋಜಿಸಿದಾಗಿನಿಂದಲೂ ಭಾರತ ಸ್ಪರ್ಧಿಸುತ್ತಿದೆ. ಇಲ್ಲಿಯವರೆಗೆ, 155 ಚಿನ್ನದ ಪದಕ ಸೇರಿದಂತೆ ಒಟ್ಟು 672 ಪದಕಗಳನ್ನು ಗೆದ್ದುಕೊಂಡಿದೆ. ಚೀನಾ ಮತ್ತು ಜಪಾನ್ ತಲಾ ಮೂರು ಸಾವಿರಕ್ಕೂ ಹೆಚ್ಚು ಪದಕಗಳನ್ನು ಜಯಿಸಿ ಕ್ರಮವಾಗಿ ಮೊದಲ ಮತ್ತು ಎರಡು ಸ್ಥಾನದಲ್ಲಿದೆ.
ಇದನ್ನೂ ಓದಿ:15 ರನ್ಗಳಿಗೆ ಆಲೌಟ್! ಇಂಡೋನೇಷ್ಯಾದೆದುರು ಮಂಗೋಲಿಯಾ ಮಹಿಳೆಯರಿಗೆ ಹೀನಾಯ ಸೋಲು