ಹ್ಯಾಂಗ್‌ಝೌ (ಚೀನಾ):ಮಂಗೋಲಿಯಾ ಮಹಿಳಾ ಕ್ರಿಕೆಟ್ ತಂಡವು ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಅತ್ಯಂತ ಕೆಟ್ಟ ದಾಖಲೆ ಬರೆಯಿತು. ಏಷ್ಯನ್ ಗೇಮ್ಸ್ 2023ರ ಅಂಗವಾಗಿ ಮಂಗಳವಾರ (ಸೆಪ್ಟೆಂಬರ್ 19) ಇಂಡೋನೇಷ್ಯಾ ವಿರುದ್ಧ ನಡೆದ ಪಂದ್ಯದಲ್ಲಿ ಮಂಗೋಲಿಯಾ ಕೇವಲ 15 ರನ್‌ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು. ಚೀನಾದ ಹ್ಯಾಂಗ್‌ಝೌನಲ್ಲಿ ಏಷ್ಯನ್ ಗೇಮ್ಸ್ ಕ್ರಿಕೆಟ್ ಪಂದ್ಯ ನಡೆಯಿತು. 20 ಓವರ್ಗಳ ಪಂದ್ಯದಲ್ಲಿ ಮಂಗೋಲಿಯಾ ಆಟಗಾರ್ತಿಯರು 20 ರನ್ ಕೂಡ ಗಳಿಸಲಿಲ್ಲ. ಇದರಿಂದಾಗಿ ಇಂಡೋನೇಷ್ಯಾ 172 ರನ್‌ಗಳಿಂದ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿತು.
ಉತ್ತಮ ಆರಂಭ ಪಡೆದ ತಂಡ:ಮೊದಲು ಬ್ಯಾಟ್ ಮಾಡಿದ ಇಂಡೋನೇಷ್ಯಾ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಮಂಗೋಲಿಯಾಕ್ಕೆ 188 ರನ್ಗಳ ಬೃಹತ್ ಗುರಿ ನೀಡಿತು. ಆರಂಭಿಕ ಆಟಗಾರ್ತಿ ರತ್ನಾ ದೇವಿ 48 ಎಸೆತಗಳಲ್ಲಿ 10 ಬೌಂಡರಿಗಳ ನೆರವಿನಿಂದ 62 ರನ್ ಗಳಿಸಿದರು. ಮತ್ತೋರ್ವ ಆರಂಭಿಕ ಆಟಗಾರ್ತಿ ನಂದಾ ಸಖರಿನಿ (35 ರನ್) ಮತ್ತು ಮರಿಯಾ ವೊಂಬಾಕಿ (22 ರನ್) ಜೊತೆಗೂಡಿ ತಂಡದ ಮೊತ್ತ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಮಂಗೋಲಿಯಾ ಬೌಲರ್‌ಗಳ ಪೈಕಿ ಮೆಂಡ್‌ಬಾಯರ್, ನಮುಂಜುಲ್, ಜರ್ಗಲ್ಸಾಯಿ ಖಾನ್ ಮತ್ತು ಗನ್ಸುಖ್ ತಲಾ ಒಂದೊಂದು ವಿಕೆಟ್ ಪಡೆದರು.
15 ರನ್‌ಗಳಿಗೆ ಆಲೌಟ್:188 ರನ್ಗಳ ಬೃಹತ್ ಗುರಿಯೊಂದಿಗೆ ಕಣಕ್ಕಿಳಿದ ಮಂಗೋಲಿಯಾ ರನ್ ಗಳಿಕೆಗಿಂತ ವೇಗವಾಗಿ ವಿಕೆಟ್ ಕಳೆದುಕೊಂಡಿತು. ಸ್ಕೋರ್ ಬೋರ್ಡ್ 9 ರನ್ ದಾಟುವಷ್ಟರಲ್ಲಿ ಮೊದಲ ಏಳು ಬ್ಯಾಟರ್‌ಗಳು ಡಗೌಟ್ ತಲುಪಿದರು. ಅಂತಿಮವಾಗಿ ಇಂಡೋನೇಷ್ಯಾ ಕೇವಲ 15 ರನ್‌ಗಳಿಗೆ ಮಂಗೋಲಿಯಾವನ್ನು ಕಟ್ಟಿ ಹಾಕಿತು. ಮಂಗೋಲಿಯಾ 10 ಓವರ್‌ಗಳಲ್ಲಿ 15 ರನ್‌ಗಳಿಗೆ ಕುಸಿದಿತ್ತು. ತನ್ನ ಇನ್ನಿಂಗ್ಸ್‌ನಲ್ಲಿ ಏಳು ಬ್ಯಾಟರ್‌ಗಳು ಡಕೌಟ್ ಆಗಿದ್ದರು. ಉಳಿದವರು ಕನಿಷ್ಠ ಎರಡಂಕಿ ರನ್ ಗಳಿಸಲೂ ಸಾಧ್ಯವಾಗಲಿಲ್ಲ.