ಮೊಂಗ್ ಕಾಕ್: ಹಾಂಕಾಂಗ್ನಲ್ಲಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಆಯೋಜಿಸಿದ್ದ ಮಹಿಳಾ ಉದಯೋನ್ಮುಖ ತಂಡಗಳ ಫೈನಲ್ ಪಂದ್ಯದಲ್ಲಿ ಭಾರತ 'ಎ' ತಂಡವು ಬಾಂಗ್ಲಾದೇಶ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಭಾರತೀಯ ಮಹಿಳಾ ಎ ತಂಡ ಪ್ರಶಸ್ತಿಗೆ ಭಾಜನವಾಗಿದೆ. ಮೊದಲಿಗೆ ಬ್ಯಾಟ್ ಬೀಸಿದ ಭಾರತದ ಮಹಿಳೆಯರ ಎ ಟೀಮ್, 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 127 ರನ್ ಗಳಿಸಿತು. ಈ ಮೂಲಕ ಎದುರಾಳಿ ಬಾಂಗ್ಲಾದೇಶ 'ಎ' ತಂಡಕ್ಕೆ 128 ರನ್ಗಳ ಗೆಲುವಿನ ಗುರಿ ನೀಡಿತ್ತು.
ಈ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ‘ಎ’ ತಂಡ ಭಾರತದ ಬೌಲರ್ ಗಳ ಎದುರು ರನ್ಗಳಿಸಲು ಪರದಾಡಬೇಕಾಯಿತು. ಅಂತಿಮವಾಗಿ ಟೀಂ ಇಂಡಿಯಾದ ಬೌಲರ್ ಗಳ ಎದುರು ಬಾಂಗ್ಲಾದೇಶದ ಮಹಿಳೆಯರ ಎ ತಂಡ 19.2 ಓವರ್ ಗಳಲ್ಲಿ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡು ಕೇವಲ 96 ರನ್ ಗಳಿಗೆ ಆಲೌಟ್ ಆಯಿತು. ಇದರಿಂದಾಗಿ ಟೀಂ ಇಂಡಿಯಾ ಈ ಪಂದ್ಯವನ್ನು 31 ರನ್ಗಳಿಂದ ಗೆದ್ದು ಬೀಗಿತು.
ಇಂದು ಮೊಂಗ್ ಕಾಕ್ನಲ್ಲಿ ನಡೆದ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮಹಿಳಾ ಉದಯೋನ್ಮುಖ ಟೀಮ್ ಕಪ್ 2023 ರ ಅಂತಿಮ ಪಂದ್ಯದಲ್ಲಿ ಭಾರತ ತಂಡದ ಪರವಾಗಿ ದಿನೇಶ್ ವೃಂದಾ 29 ಎಸೆತ ಎದುರಿಸಿ 36 ರನ್ ಗಳಿಸಿದರು. ಅವರ ಈ ಸ್ಕೋರ್ನಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಸಹ ಇತ್ತು. ಇನ್ನು ಕನಿಕಾ ಅಹುಜಾ 23 ಎಸೆತಗಳನ್ನು ಎದುರಿಸಿ, 4 ಬೌಂಡರಿಗಳ ನೆರವಿನಿಂದ 30 ರನ್ ಗಳಿಸಿದರು. ಆದರೆ, ನಾಯಕಿ ಶ್ವೇತಾ ಸೆಹ್ರಾವತ್ 13 ರನ್ ಗಳಿಸಲಷ್ಟೇ ಶಕ್ತರಾದರು. ವುಮೆನ್ಸ್ ಟೀಂ ಇಂಡಿಯಾ ಸಣ್ಣ ಸಣ್ಣ ಮೊತ್ತಗಳ ಮೂಲಕ 127 ರನ್ಗಳನ್ನ ಸೇರಿಸುವ ಮೂಲಕ ಎದುರಾಳಿಗೆ 128 ರನ್ಗಳ ಟಾರ್ಗೆಟ್ ನೀಡಿತು.