ಮುಂಬೈ:ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ವೇಳಾಪಟ್ಟಿಯನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಬುಧವಾರ ಪ್ರಕಟಿಸಿದೆ. ಸೆಪ್ಟೆಂಬರ್ 2ರಂದು ಕ್ಯಾಂಡಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧದ ಪಂದ್ಯದ ಮೂಲಕ ಟೀಂ ಇಂಡಿಯಾ ಏಷ್ಯಾಕಪ್ ಅಭಿಯಾನವನ್ನು ಪ್ರಾರಂಭಿಸಲಿದೆ. ಸೆ.10ರಂದು ಕೊಲಂಬೊದಲ್ಲಿ ಸೂಪರ್ 4 ಪಂದ್ಯದಲ್ಲಿ ಮತ್ತೊಮ್ಮೆ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಲಿವೆ.
ಈ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆರು ತಂಡಗಳು ಪಾಲ್ಗೊಳ್ಳಲಿವೆ. ಈ ಬಾರಿ ಏಷ್ಯಾಕಪ್ ಹೈಬ್ರಿಡ್ ಮಾದರಿಯಲ್ಲಿ ನಡೆಯುತ್ತಿದೆ. ನಾಲ್ಕು ಪಂದ್ಯಗಳು ಪಾಕಿಸ್ತಾನದಲ್ಲಿ ಜರುಗಲಿದ್ದು, ಫೈನಲ್ ಸೇರಿದಂತೆ ಒಂಬತ್ತು ಪಂದ್ಯಗಳು ಶ್ರೀಲಂಕಾದ ಕ್ಯಾಂಡಿ ಮತ್ತು ಕೊಲಂಬೊದಲ್ಲಿ ನಡೆಯಲಿವೆ. ಆಗಸ್ಟ್ 30ರಂದು ಮೊದಲ ಪಂದ್ಯವು ಮುಲ್ತಾನ್‌ನಲ್ಲಿ ಪಾಕಿಸ್ತಾನ ಹಾಗೂ ನೇಪಾಳ ನಡುವೆ ನಡೆಯಲಿದೆ. ಸೆ.17ರಂದು ಪ್ರೇಮದಾಸ ಕ್ರೀಡಾಂಗಣದಲ್ಲಿ ಫೈನಲ್ ಹಣಾಹಣಿ ನಡೆಯಲಿದೆ.
ಭಾರತ, ಪಾಕಿಸ್ತಾನ ಮತ್ತು ನೇಪಾಳ 'ಎ' ಗುಂಪಿನಲ್ಲಿದ್ದರೆ, ಅಫ್ಘಾನಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶ 'ಬಿ' ಗುಂಪಿನಲ್ಲಿವೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷ ಜಯ್ ಶಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಈ ಕುರಿತ ಟ್ವೀಟ್ ಮಾಡಿರುವ ಜಯ್ ಶಾ, "ಬಹು ನಿರೀಕ್ಷಿತ ಪುರುಷರ ಏಕದಿನ ಏಷ್ಯಾಕಪ್ 2023ರ ವೇಳಾಪಟ್ಟಿಯನ್ನು ಪ್ರಕಟಿಸಲು ನನಗೆ ಸಂತೋಷವಾಗಿದೆ. ವೈವಿಧ್ಯಮಯ ರಾಷ್ಟ್ರಗಳನ್ನು ಒಟ್ಟಿಗೆ ಒಂದುಗೂಡಿಸುವ ಏಕತೆ ಮತ್ತು ಒಗ್ಗಟ್ಟಿನ ಸಂಕೇತ! ನಾವು ಕ್ರಿಕೆಟ್ ಶ್ರೇಷ್ಠತೆಯ ಸಂಭ್ರಮದಲ್ಲಿ ಕೈಜೋಡಿಸೋಣ ಮತ್ತು ನಮ್ಮೆಲ್ಲರನ್ನು ಸಂಪರ್ಕಿಸುವ ಬಂಧಗಳನ್ನು ಪಾಲಿಸೋಣ ಎಂದು ಹೇಳಿದ್ದಾರೆ.
ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಸೆಪ್ಟೆಂಬರ್ 2ರಂದು ಕ್ಯಾಂಡಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಎರಡನೇ ಗುಂಪು ಹಂತದ ಪಂದ್ಯವನ್ನು ಸೆಪ್ಟೆಂಬರ್ 4ರಂದು ನೇಪಾಳ ವಿರುದ್ಧ ಇದೇ ಮೈದಾನದಲ್ಲಿ ಭಾರತ ಆಡಲಿದೆ. ಸೂಪರ್ ಫೋರ್ ಹಂತದ ಪಂದ್ಯಗಳು ಸೆಪ್ಟೆಂಬರ್ 6ರಿಂದ ಆರಂಭವಾಗಲಿವೆ. ಈ ಬಾರಿಯ ಏಷ್ಯಾಕಪ್ ಟೂರ್ನಿಯ ಆತಿಥ್ಯವನ್ನು ಪಾಕಿಸ್ತಾನ ವಹಿಸಬೇಕಿತ್ತು. ಭಾರತೀಯ ಕ್ರಿಕೆಟ್ ಮಂಡಳಿಯು ಪಾಕ್ಗೆ ತಂಡವನ್ನು ಕಳುಹಿಸಲು ನಿರಾಕರಿಸಿತ್ತು. ಇದರಿಂದ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿಯನ್ನು ಆಯೋಜಿಸಲಾಗಿದೆ.
ಭಾರತದಲ್ಲಿ ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಐಸಿಸಿ ಕ್ರಿಕೆಟ್ ವಿಶ್ವಕಪ್ ನಡೆಯಲಿದೆ. ಈ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು 50 ಓವರ್‌ಗಳ ಮಾದರಿಯಲ್ಲಿ ಏಷ್ಯಾಕಪ್ ನಡೆಯಲಿದೆ. ಕಳೆದ ವರ್ಷ ಪ್ರಶಸ್ತಿ ಗೆದ್ದಿದ್ದ ಶ್ರೀಲಂಕಾ ಹಾಲಿ ಏಷ್ಯಾ ಕಪ್ ಚಾಂಪಿಯನ್ ಆಗಿದೆ. ಇದುವರೆಗೆ ಒಟ್ಟು ಆರು ಪ್ರಶಸ್ತಿಗಳನ್ನು ಲಂಕಾ ಗೆದ್ದಿದೆ. ಆದರೆ, ಟೂರ್ನಿಯ ಇತಿಹಾಸದಲ್ಲಿ ಭಾರತವು ಒಟ್ಟು 7 ಪ್ರಶಸ್ತಿಗಳೊಂದಿಗೆ ಅತ್ಯಂತ ಯಶಸ್ವಿ ತಂಡವಾಗಿದೆ.
ಪೂರ್ಣ ವೇಳಾಪಟ್ಟಿ - ಗುಂಪು ಹಂತದ ಪಂದ್ಯಗಳು
ಆಗಸ್ಟ್ 30: ಪಾಕಿಸ್ತಾನ V/s ನೇಪಾಳ, ಮುಲ್ತಾನ್
ಆಗಸ್ಟ್ 31: ಬಾಂಗ್ಲಾದೇಶ V/s ಶ್ರೀಲಂಕಾ, ಕ್ಯಾಂಡಿ
ಸೆಪ್ಟೆಂಬರ್ 2: ಭಾರತ V/s ಪಾಕಿಸ್ತಾನ, ಕ್ಯಾಂಡಿ
ಸೆಪ್ಟೆಂಬರ್ 3: ಬಾಂಗ್ಲಾದೇಶ V/s ಅಫ್ಘಾನಿಸ್ತಾನ, ಲಾಹೋರ್