ಕೊಲಂಬೊ (ಶ್ರೀಲಂಕಾ): ಏಷ್ಯಾಕಪ್ ಸೂಪರ್ ಫೋರ್ ಪಂದ್ಯದ ಭಾರತ ಪಾಕಿಸ್ತಾನ ಮ್ಯಾಚ್ಗೆ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಮೀಸಲು ದಿನವನ್ನು ಎಸಿಸಿ ಪ್ರಕಟಿಸಿತ್ತು. ಆದರೆ ವಿಪರ್ಯಾಸ ಎಂದರೆ ಮೀಸಲು ದಿನವೂ ಮಳೆ ಕಾಡುತ್ತಿದ್ದು, 3 ಗಂಟೆಗೆ ಆರಂಭವಾಗಬೇಕಾಗಿದ್ದ ಪಂದ್ಯ ವಿಳಂಬವಾಗಿದೆ. ನಿನ್ನೆ (ಭಾನುವಾರ) 24.1 ಓವರ್ ವರೆಗಿನ ಇನ್ನಿಂಗ್ಸ್ನ್ನು ಭಾರತ ಆಡಿತ್ತು. ಈ ವೇಳೆ ಮಳೆ ಬಂದ ಕಾರಣ ಪಂದ್ಯವನ್ನು ಸೋಮವಾರಕ್ಕೆ ಮುಂದೂಡಲಾಗಿತ್ತು.
ನಿನ್ನೆ ಸಂಜೆ 5ರ ಸುಮಾರಿಗೆ ಆರಂಭವಾದ ಮಳೆ ಸುಮಾರು ಎರಡು ಗಂಟೆಗಳ ಕಾಲ ಎಡೆಬಿಡದೇ ಸುರಿಯಿತು. ಮಳೆ ಬಿಟ್ಟ ನಂತರ ರಾತ್ರಿ 9ರ ವರೆಗೆ ಮೈದಾನವನ್ನು ಅಂಪೈರ್ಗಳು ಪರಿಶೀಲಿಸಿದರು. ಆದರೆ ಪಿಚ್ನ ಸುತ್ತಮುತ್ತಲಿನ ಮೈದಾನ ಹೆಚ್ಚು ತೇವವಾಗಿದ್ದರಿಂದ ಆಟವನ್ನು ಸೋಮವಾರಕ್ಕೆ ಮುಂದೂಡಲಾಯಿತು. ಆದರೆ ಇಂದು ಮುಂಜಾನೆಯಿಂದಲೇ ಮಳೆ ಶುರುವಾಗಿತ್ತು. ಈಗಲೂ ಆಗಾಗ ಮಳೆ ಬರುತ್ತಿರುವುದು ಪಂದ್ಯಕ್ಕೆ ಬಿಡುವು ಕೊಡುತ್ತಾ ಅಥವಾ ಇಲ್ಲವಾ ಎಂಬುದು ಸ್ಪಷ್ಟವಾಗ್ತಿಲ್ಲ.
ಪ್ರೇಮದಾಸ ಕ್ರೀಡಾಂಗಣದ ಸಂಪೂರ್ಣ ಪ್ರದೇಶವನ್ನು ಕವರ್ ಮಾಡಲಾಗಿದೆ. ಆದರೆ ಮಳೆ ಬಿಡದೇ ಪಂದ್ಯ ಆಡಿಸುವುದು ಕಷ್ಟ. ನಿನ್ನೆ ರಾತ್ರಿಯ ಲೆಕ್ಕಾಚಾರದ ಪ್ರಕಾರ 20 ಓವರ್ನ ಪಂದ್ಯವನ್ನು ಆಡಿಸಲು ಅವಕಾಶ ಸಿಕ್ಕರು ಡಿಎಲ್ಎಸ್ ನಿಯಮದಂತೆ ಪಾಕಿಸ್ತಾನಕ್ಕೆ 180 ರನ್ ಗುರಿಯನ್ನು ನೀಡಲಾಗುತ್ತದೆ.