ದುಬೈ:ಏಷ್ಯಾ ಕಪ್ನಿಂದ ಹೊರಬಿದ್ದಿರುವ ಭಾರತ ಇಂದು ಆಫ್ಘಾನಿಸ್ತಾನ ವಿರುದ್ಧ ಸೆಣಸಾಡಲಿದೆ. ಇದು ಸೂಪರ್ 4 ಹಂತದ ಕೊನೆಯ ಪಂದ್ಯವಾಗಿದ್ದು, ಉಭಯ ತಂಡಗಳು ಟೂರ್ನಿಯಿಂದ ಹೊರಬಿದ ಕಾರಣ ಔಪಚಾರಿಕ ಪಂದ್ಯವಾಡಲಿವೆ.
ಭಾರತ ತಂಡ ಸೂಪರ್ 4 ಹಂತದಲ್ಲಿ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಪ್ರದರ್ಶನ ನೀಡದೇ ಕಳಪೆ ತಂಡದ ಆಯ್ಕೆಯಿಂದಾಗಿ ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ಸೋಲು ಕಂಡು ಏಷ್ಯಾ ಕಪ್ ಟೂರ್ನಿಯಿಂದಲೇ ಆಚೆ ಬಿದ್ದಿದೆ. ಇದು ಭಾರತೀಯ ಅಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿದೆ.
ತಂಡದಲ್ಲಿ ಮಾಡಿದ ಪ್ರಯೋಗಗಳು ಏಷ್ಯಾ ಕಪ್ ಟೂರ್ನಿಯಲ್ಲಿ ಕೈ ಸುಟ್ಟುಕೊಳ್ಳುವಂತೆ ಮಾಡಿದೆ. ಇದು ಮುಖ್ಯ ಕೋಚ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾ ಮೇಲೆ ಒತ್ತಡ ಹೆಚ್ಚಿಸಿದೆ. ಆಟಗಾರರು ವಿಫಲವಾದಾಗ ಪ್ಲಾನ್ ಬಿ ಮಾಡದೇ ಇರುವುದು ಟೀಕೆಗೆ ಗುರಿಯಾಗಿದೆ.
ರಿಷಬ್ ಪಂತ್ ಅಥವಾ ದೀಪಕ್ ಹೂಡಾ ಬದಲಿಗೆ ದಿನೇಶ್ ಕಾರ್ತಿಕ್ ಅವರನ್ನು ಅಂತಿಮ ಪಂದ್ಯದಲ್ಲಿ ಆಡಿಸಲಿದ್ದಾರಾ ಎಂಬುದು ಪ್ರಶ್ನೆಯಾಗಿದೆ. ಅಗ್ರಕ್ರಮಾಂಕದಲ್ಲಿ ದೀಪಕ್ ಹೂಡಾ ಉತ್ತಮ ಪ್ರದರ್ಶನ ತೋರಿದರೂ, 7ನೇ ಕ್ರಮಾಂಕದಲ್ಲಿ ಆಡಿಸಿ ಫಿನಿಶರ್ ಜವಾಬ್ದಾರಿ ನೀಡಲಾಗಿದೆ. ಇದು ತಂಡದ ಯೋಜನೆಯನ್ನೇ ಬುಡಮೇಲು ಮಾಡಿದೆ.
ಶ್ರೀಲಂಕಾದ ಆರಂಭಿಕರಾದ ಪಾತುಮ್ ನಿಸ್ಸಾಂಕಾ ಮತ್ತು ಕುಸಾಲ್ ಮೆಂಡಿಸ್ ಬಿರುಸಾಗಿ ಬ್ಯಾಟ್ ಬೀಸುತ್ತಿದ್ದಾಗ ಆಫ್ ಸ್ಪಿನ್ನರ್ ದೀಪಕ್ ಹೂಡಾರಿಗೆ ಬೌಲ್ ನೀಡದ ನಾಯಕ ರೋಹಿತ್ ನಿರ್ಧಾರ ಪ್ರಶ್ನಾರ್ಹವಾಗಿದೆ.
ಆಲ್ರೌಂಡರ್ ಹಾರ್ದಿಕ್ ಪಾಂಡ್ಯಾರನ್ನು ಐದನೇ ಸ್ಪೆಷಲಿಸ್ಟ್ ಬೌಲರ್ ಆಗಿ ಆಡಿಸಲು ಸಾಧ್ಯವಿಲ್ಲ ಎಂಬುದು ಶ್ರೀಲಂಕಾ ಪಂದ್ಯದಲ್ಲಿ ಸಾಬೀತಾಗಿದೆ. ಇದು ಆಟಗಾರರ ಮೇಲೆ ಒತ್ತಡ ಹೆಚ್ಚಿಸಲಿದೆ. ಯಜುವೇದ್ರ ಚಹಲ್ ಮೂರು ವಿಕೆಟ್ ಪಡೆದು ಫಾರ್ಮ್ಗೆ ಮರಳಿದ್ದಾರೆ. ಆವೇಶ್ ಖಾನ್ ಬದಲಾಗಿ ಸ್ಥಾನ ಪಡೆದ ದೀಪಕ್ ಚಹರ್ ಈ ಪಂದ್ಯದಲ್ಲಿ ಆಡುವ ಸಾಧ್ಯತೆ ಇದೆ.
ಬೌಲಿಂಗ್ ಪಡೆಯ ನೇತೃತ್ವ ವಹಿಸಿದ ಭುವನೇಶ್ವರ್ ಕುಮಾರ್ ಸತತ ಎರಡು ಪಂದ್ಯಗಳಲ್ಲಿ ಕಳಪೆ ಬೌಲಿಂಗ್ನಿಂದ ಪಂದ್ಯವನ್ನೇ ಕೈಚೆಲ್ಲಬೇಕಾಯಿತು. ಯುವ ವೇಗಿ ಅರ್ಷದೀಪ್ ಸಿಂಗ್ ಮೇಲೆ ಒತ್ತಡ ಉಂಟಾಗಿತ್ತು. ಭುವಿ ವಿರುದ್ಧದ ಟೀಕೆಗೆ ನಾಯಕ ರೋಹಿತ್ ಶರ್ಮಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 2 ಪಂದ್ಯಗಳಲ್ಲಿನ ಕೆಟ್ಟ ಪ್ರದರ್ಶನ ಆಟಗಾರರನ್ನು ನಿರ್ಧರಿಸಲಾಗಲ್ಲ ಎಂದಿದ್ದಾರೆ.
ತಂಡಗಳು ಇಂತಿವೆ-ಭಾರತ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯಾ, ಅಕ್ಸರ್ ಪಟೇಲ್, ಆರ್. ಅಶ್ವಿನ್, ಯಜುವೇಂದ್ರ ಚಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ದೀಪಕ್ ಚಹರ್.
ಅಫ್ಘಾನಿಸ್ತಾನ: ಮೊಹಮ್ಮದ್ ನಬಿ (ನಾಯಕ), ನಜಿಬುಲ್ಲಾ ಝದ್ರಾನ್, ಅಫ್ಸರ್ ಝಜೈ, ಅಜ್ಮತುಲ್ಲಾ ಒಮರ್ಝೈ, ಫರೀದ್ ಅಹ್ಮದ್ ಮಲಿಕ್, ಫಜಲ್ ಹಕ್ ಫಾರೂಕಿ, ಹಶ್ಮತುಲ್ಲಾ ಶಾಹಿದಿ, ಹಜರತುಲ್ಲಾ ಝಜೈ, ಇಬ್ರಾಹಿಂ ಜದ್ರಾನ್, ಕರೀಮ್ ಜದ್ರಾನ್, ಕರೀಮ್ ಜದ್ರಾನ್, ಕರೀಮ್ ಜದ್ರಾನ್ ನವೀನ್ ಉಲ್ ಹಕ್, ನೂರ್ ಅಹ್ಮದ್, ರಹಮಾನುಲ್ಲಾ ಗುರ್ಬಾಜ್, ರಶೀದ್ ಖಾನ್ ಮತ್ತು ಸಮೀವುಲ್ಲಾ ಶಿನ್ವಾರಿ.
ಪಂದ್ಯ ಆರಂಭ: ಸಂಜೆ 7:30.
ಓದಿ:ಏಷ್ಯಾ ಕಪ್ ತಂಡದಲ್ಲಿ ವೇಗಿ ಮೊಹಮದ್ ಶಮಿ ಯಾಕಿಲ್ಲ.. ತಂಡದ ಆಯ್ಕೆ ಬಗ್ಗೆ ರವಿಶಾಸ್ತ್ರಿ ಟೀಕೆ