ಕರ್ನಾಟಕ

karnataka

ETV Bharat / sports

ಏಷ್ಯಾ ಕಪ್: ರೋಹಿತ್​, ಗಿಲ್ ಅರ್ಧಶತಕ.. ನೇಪಾಳ ವಿರುದ್ಧ ಭಾರತಕ್ಕೆ 10 ವಿಕೆಟ್​ಗಳ ಜಯ

ಏಷ್ಯಾ ಕಪ್​ ಟೂರ್ನಿಯಲ್ಲಿ ಭಾರತ ತಂಡ ನೇಪಾಳ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದೆ. ರೋಹಿತ್ ಶರ್ಮಾ​ ಅಜೇಯ 74 ಹಾಗೂ ಶುಭಮನ್ ಗಿಲ್ ಅಜೇಯ 67 ರನ್​ ಸಿಡಿಸಿ ತಂಡಕ್ಕೆ ಸುಲಭದ ಗೆಲುವು ತಂದುಕೊಟ್ಟರು.

asia cup: India vs Nepal, 5th Match
asia cup: India vs Nepal, 5th Match

By ETV Bharat Karnataka Team

Published : Sep 4, 2023, 11:48 PM IST

Updated : Sep 5, 2023, 12:38 AM IST

ಪಲ್ಲಕೆಲೆ (ಶ್ರೀಲಂಕಾ): ನಾಯಕ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್​ ಅವರ ಭರ್ಜರಿ ಬ್ಯಾಟಿಂಗ್​ ನೆರವಿನಿಂದ ಭಾರತ ತಂಡ ನೇಪಾಳ ವಿರುದ್ಧ 10 ವಿಕೆಟ್​ಗಳಿಂದ ಜಯಭೇರಿ ಬಾರಿಸಿದೆ. ಈ ಜಯದೊಂದಿಗೆ ಟೀಂ ಇಂಡಿಯಾ ಮೂರು ಅಂಕದೊಂದಿಗೆ ಸೂಪರ್ ಫೋರ್​​ಗೆ ಪ್ರವೇಶಿಸಿದೆ. ಮತ್ತೊಂದೆಡೆ, ಭಾರತದ ವಿರುದ್ಧ ತನ್ನ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್​ ಪಂದ್ಯವಾಡಿದ ನೇಪಾಳ ತಂಡ ಸೋತು ಟೂರ್ನಿಯಿಂದ ಹೊರ ಬಿದ್ದಿದೆ. ​

ಶ್ರೀಲಂಕಾದ ಪಲ್ಲಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಟಾಸ್​ ಗೆದ್ದ ಭಾರತ ಬೌಲಿಂಗ್​ ಆಯ್ದುಕೊಂಡಿತ್ತು. ಇದರಿಂದ ಮೊದಲು ಬ್ಯಾಟ್ ಮಾಡಿದ ನೇಪಾಳ ತಂಡ 48.2 ಓವರ್​ಗಳಲ್ಲಿ 230 ರನ್​ಗಳ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿ ಆಲೌಟ್​ ಆಯಿತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಪರ ಆರಂಭಿಕರಾದ ರೋಹಿತ್​ ಶರ್ಮಾ ಹಾಗೂ ಶುಭಮನ್ ಗಿಲ್​ 2.1 ಓವರ್‌ಗಳಲ್ಲಿ 17 ರನ್ ಗಳಿಸಿ ಆಡುತ್ತಿದ್ದರು. ಆದರೆ, ಈ ವೇಳೆ ಪಂದ್ಯಕ್ಕೆ ಮಳೆ ಅಡ್ಡಿ ಉಂಟು ಮಾಡಿತು. ಇದರಿಂದ ಸುಮಾರು ಹೊತ್ತು ಪಂದ್ಯ ಸ್ಥಗಿತಗೊಳಿಸಲಾಯಿತು. ಬಳಿಕ 23 ಓವರ್​ಗಳಿಗೆ ಪಂದ್ಯ ಕಡಿತಗೊಳಿಸಿ, ಡಿಎಲ್​ಎಸ್​ ನಿಯಮದಡಿ ಟೀಂ ಇಂಡಿಯಾಗೆ 145 ರನ್​ ಟಾರ್ಗೆಟ್​ ನಿಗದಿ ಪಡಿಸಲಾಗಿತು.

ತಮ್ಮ ಬ್ಯಾಟಿಂಗ್ ಪುನಾರಂಭ ಮಾಡಿದ ರೋಹಿತ್​ ಹಾಗೂ ಗಿಲ್​ ರನ್​ ಗಳಿಸಲು ಕೊಂಚ ಸಮಯ ತೆಗೆದುಕೊಂಡರು. ಬಳಿಕ ತಮ್ಮ ಭರ್ಜರಿ ಹೊಡೆತಗಳನ್ನು ಇಬ್ಬರೂ ಆಟಗಾರರು ಆರಂಭಿಸಿದರು. ನೇಪಾಳದ ಬೌಲರ್​ಗಳನ್ನು ದಂಡಿಸಿದ ರೋಹಿತ್​ ಶರ್ಮಾ ಕೇವಲ 39 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಮತ್ತೊಂದೆಡೆ, ಗಿಲ್​ ಸಹ ಉತ್ತಮ ಹೊಡೆತಗಳೊಂದಿಗೆ 47 ಬಾಲ್​ಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು.

ಮತ್ತೊಂದೆಡೆ, ನೇಪಾಳದ ವೇಗಿಗಳು ಹಾಗೂ ಸ್ಪಿನರ್​ಗಳು ಈ ಜೋಡಿಯನ್ನು ಬೇರ್ಪಡಿಸಲು ತಮ್ಮ ಉತ್ತಮ ಎಸೆತಗಳೊಂದಿಗೆ ಸಾಕಷ್ಟು ಯತ್ನಿಸಿದರು. ಆದರೆ, ಯಾವುದೇ ಒತ್ತಡಕ್ಕೆ ಸಿಲುಕದೇ ರೋಹಿತ್​ ಹಾಗೂ ಗಿಲ್​ ಬ್ಯಾಟ್ ಬೀಸಿದರು. ಅಂತಿಮವಾಗಿ ರೋಹಿತ್​ ಅಜೇಯ 74 ಹಾಗೂ ಗಿಲ್ ಅಜೇಯ 67 ರನ್​ ಸಿಡಿಸಿ ತಂಡಕ್ಕೆ ಸುಲಭದ ಗೆಲುವು ತಂದುಕೊಟ್ಟರು. ಇನ್ನೂ 17 ಎಸೆತಗಳು ಬಾಕಿ ಇರುವಂತೆಯೇ ವಿಕೆಟ್​ ನಷ್ಟವಿಲ್ಲದೆ ಟೀಂ ಇಂಡಿಯಾ ಜಯ ಸಾಧಿಸಿತು.

ಎ ಗ್ರೂಪ್​ನಲ್ಲಿ ಪಾಕಿಸ್ತಾನ ಈಗಾಗಲೇ ಮೂರು ಅಂಕಗಳೊಂದಿಗೆ ಸೂಪರ್ ಫೋರ್​ ಹಂತಕ್ಕೆ ತಲುಪಿದೆ. ಈಗ ಟೀಂ ಇಂಡಿಯಾ ಸಹ ಈ ಗೆಲುವಿನೊಂದಿಗೆ ಮೂರು ಅಂಕಗಳನ್ನು ಹೊಂದಿದ್ದು, ಸೂಪರ್ ಫೋರ್​ ಹಂತಕ್ಕೆ ಪ್ರವೇಶಿಸಿದೆ.

ಇದನ್ನೂ ಓದಿ:IND vs NEP: ಸದೃಢ ಬ್ಯಾಟಿಂಗ್​ ಪ್ರದರ್ಶಿಸಿದ ನೇಪಾಳ.. ಭಾರತಕ್ಕೆ 231 ರನ್​ಗಳ ಗುರಿ

Last Updated : Sep 5, 2023, 12:38 AM IST

ABOUT THE AUTHOR

...view details