ಕೊಲಂಬೊ (ಶ್ರೀಲಂಕಾ): ಏಷ್ಯಾಕಪ್ನಲ್ಲಿ ಅತಿ ಹೆಚ್ಚು ವೀಕ್ಷಕರು ಕಾದುಕುಳಿತಿರುವ ಪಂದ್ಯ ಎಂದರೆ ಅದು ಭಾರತ ಮತ್ತು ಪಾಕಿಸ್ತಾನ ನಡುವಿನ ಹಣಾಹಣಿಗೆ. ಗುಂಪು ಹಂತದಲ್ಲಿ ಮಳೆಯಿಂದ ಪಂದ್ಯ ರದ್ದಾದ ಹಿನ್ನೆಲೆ ವಿಶ್ವ ಕ್ರಿಕೆಟ್ ಅಭಿಮಾನಿಗಳು ಸಪ್ಪೆ ಮುಖ ಹಾಕಬೇಕಾಯಿತು. ಹೀಗಾಗಿ ಎಸಿಸಿ ಸೂಪರ್ ಫೋರ್ ಹಂತದ ಪಂದ್ಯದಲ್ಲಿ ಮತ್ತೆ ಪಾಕ್ - ಭಾರತ ಪಂದ್ಯಕ್ಕೆ ಮಳೆ ಬಂದರೆ ಅದಕ್ಕೆ ಪರಿಹಾರ ಕಂಡುಕೊಂಡಿದೆ.
ಸೂಪರ್ ಫೋರ್ ಹಂತದ ಒಂದು ಪಂದ್ಯ ಪಾಕಿಸ್ತಾನದ ಲಾಹೋರ್ನಲ್ಲಿ ನಡೆದಿದ್ದು ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಮುಖಾಮುಖಿ ಆಗಿತ್ತು, ಇದರಲ್ಲಿ ಪಾಕ್ ಪ್ರಬಾವಿ ಬ್ಯಾಟಿಂಗ್ ಮತ್ತು ಬೌಲಿಂಗ್ನಿಂದ 7 ವಿಕೆಟ್ನ ಭರ್ಜರಿ ಜಯ ಸಾಧಿಸಿದೆ. ಇನ್ನುಳಿದ ಏಷ್ಯಾಕಪ್ನ ಎಲ್ಲ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿದೆ. ಸೂಪರ್ ಫೋರ್ಗೆ ಆಯ್ಕೆ ಆದ ಮೂರು ತಂಡಗಳು ಪಾಕಿಸ್ತಾನದಲ್ಲಿರುವ ಕಾರಣ ನಿನ್ನೆ (ಗುರುವಾರ) ಮತ್ತು ಇಂದು ಪಂದ್ಯಗಳಿಗೆ ಬಿಡುವು ಕೊಡಲಾಗಿದೆ. ನಾಳೇ ಶ್ರೀಲಂಕಾ ಮತ್ತು ಬಾಂಗ್ಲಾದ ನಡುವೆ ಎರಡನೇ ಸೂಪರ್ 4 ಫೈಟ್ ನಡೆಯಲಿದೆ.
ಸೆಪ್ಟೆಂಬರ್ 10ರಂದು ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿ ಆಗಲಿದೆ. ಈ ಪಂದ್ಯಕ್ಕೆ ಮಳೆ ಬಂದರೆ ಮೀಸಲು ದಿನದಂದು ಪಂದ್ಯವನ್ನು ಆಡಿಸಲು ಈಗ ಎಸಿಸಿ ನಿರ್ಧಾರ ಮಾಡಿದೆ. ಅಲ್ಲದೇ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿ ಆದರೂ ಅದನ್ನೂ ಮೀಸಲು ದಿನ ಮಡೆಸಲಾಗುತ್ತದೆ ಎಂದು ಹೇಳಲಾಗಿದೆ.
"2023 ರ ಸೆಪ್ಟೆಂಬರ್ 10 ರಂದು ಕೊಲಂಬೊದಲ್ಲಿರುವ ಆರ್. ಪ್ರೇಮದಾಸ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಾಕಿಸ್ತಾನ ಮತ್ತು ಭಾರತ ನಡುವಿನ ಸೂಪರ್-4 ಪಂದ್ಯಕ್ಕೆ ಮೀಸಲು ದಿನವನ್ನು ಸಂಯೋಜಿಸಲಾಗಿದೆ. ಪಾಕ್ ವಿರುದ್ಧ ಭಾರತ ಆಟದ ಸಮಯದಲ್ಲಿ ಪ್ರತಿಕೂಲ ಹವಾಮಾನದ ಹಿನ್ನೆಲೆ 10 ರಂದು ರದ್ದಾದಲ್ಲಿ, ಸೆಪ್ಟೆಂಬರ್ 11 ರಂದು ನಡೆಯಲಿದೆ. ಟಿಕೆಟ್ ಕಳೆದುಕೊಳ್ಳದೇ ಅದೇ ಟಿಕೆಟ್ನಲ್ಲಿ ಬಂದು ಮಾರನೇ ದಿನ ಪಂದ್ಯವನ್ನು ವೀಕ್ಷಿಸಿ" ಎಂದು ಪ್ರೇಕ್ಷಕರಿಗೆ ಎಸಿಸಿ ತನ್ನ ಪ್ರಕಟಣೆಯಲ್ಲಿ ಸಲಹೆ ನೀಡಿದೆ.
ಪಂದ್ಯ ಮೀಸಲು ದಿನದಂದು ಆಡಿಸಿದಲ್ಲಿ ಭಾರತ ತಂಡಕ್ಕೆ ಒತ್ತಡ ಹೆಚ್ಚಾಗಲಿದೆ. ಏಕೆಂದರೆ, ಪಾಕಿಸ್ತಾನ - ಭಾರತ ಮ್ಯಾಚ್ 11 ರಂದು ನಡೆದಲ್ಲಿ, ಟೀಮ್ ಇಂಡಿಯಾ 12 ರಂದು ಮತ್ತೆ ಅದೇ ಮೈದಾನದಲ್ಲಿ ಶ್ರೀಲಂಕಾವನ್ನು ಎದುರಿಸಲಿದೆ. ನಂತರ 15 ರಂದು ಬಾಂಗ್ಲಾ ವಿರುದ್ಧ ಆಟಬೇಕಿದೆ. ಹೀಗೆ ಏಕದಿನ ಪಂದ್ಯವನ್ನು ದಿನ ಬಿಡುವಿಲ್ಲದೇ ಆಡುವುದು ಆಟಗಾರರಿಗೆ ಹೆಚ್ಚು ಒತ್ತಡ ಆಗುವ ಸಾಧ್ಯತೆಯೂ ಇದೆ. ಆದರೆ, ಭಾರತ - ಪಾಕಿಸ್ತಾನ ಪಂದ್ಯಕ್ಕೆ ಮಾತ್ರ ಈ ವಿಶೇಷ ಆದ್ಯತೆ ನೀಡಲಾಗಿದೆ ಬಾಕಿ ಪಂದ್ಯಗಳಿಗೆ ಮಳೆ ಅಡ್ಡಿ ಆದರೆ ಏನು ಎಂಬುದರ ಬಗ್ಗೆ ಯಾವುದೇ ವಿವರಣೆ ಪ್ರಕಟಣೆಯಲ್ಲಿಲ್ಲ.
ಟಿಕೆಟ್ ದರ ಇಳಿಕೆ: ಭಾರತ - ಪಾಕಿಸ್ತಾನ ಪಂದ್ಯಕ್ಕೆ ಜನ ಮುಗಿ ಬೀಳುವುದು ಸಾಮಾನ್ಯ. ಆದರೆ ಮೊನ್ನೆ ಸಪ್ಟೆಂಬರ್ 2 ರಂದು ನಡೆದ ಪಂದ್ಯಕ್ಕೆ ಕಡಿಮೆ ಸಂಖ್ಯೆಯ ಟಿಕೆಟ್ ಮಾರಾಟವಾಗಿತ್ತು. ಈಗ ಎಸಿಸಿ ಟಿಕೆಟ್ ದರ ಇಳಿಕೆ ಮಾಡಿದೆ ಆದರೆ, ಭಾರತ - ಪಾಕಿಸ್ತಾನ ಪಂದ್ಯ ಬಿಟ್ಟು ಮಿಕ್ಕ ಪಂದ್ಯಗಳ ದರ ಮಾತ್ರ ಇಳಿಸಿದೆ. ಅಂದರೆ ಸೆಪ್ಟೆಂಬರ್ 9, 12, 14, ಮತ್ತು 15 ರಂದು ನಡೆಯಲಿರುವ ಪಂದ್ಯಗಳಿಗೆ ಕಡಿತವು ಅನ್ವಯಿಸುತ್ತದೆ. ಆದಾಗ್ಯೂ, ಸೆಪ್ಟೆಂಬರ್ 10 ರಂದು ಪಾಕಿಸ್ತಾನ ಮತ್ತು ಭಾರತ ನಡುವಿನ ಪಂದ್ಯ ಮತ್ತು ಪಂದ್ಯಾವಳಿಯ ಫೈನಲ್‌ಗೆ, ಆಯಾ ಬ್ಲಾಕ್‌ಗಳಿಗೆ ಟಿಕೆಟ್ ದರಗಳು ಮೂಲತಃ ನಿಗದಿಪಡಿಸಿದ ಬೆಲೆಗಳಲ್ಲಿ ಉಳಿಯುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಫೈನಲ್, 10ನೇ ತಾರೀಕಿನ ಪಂದ್ಯ ಹೊರತುಪಡಿಸಿ ಕೊಲಂಬೊದ ಲೋವರ್ ಬ್ಲಾಕ್‌ಗಳ 'ಸಿ' ಮತ್ತು 'ಡಿ' ಟಿಕೆಟ್‌ಗಳನ್ನು ಪ್ರತಿ ಟಿಕೆಟ್‌ಗೆ 1000 ಶ್ರೀಲಂಕಾ ರೂಗೆ ಇಳಿಸಲಾಗಿದೆ.
ಇದನ್ನೂ ಓದಿ:Shubman Gill: 24ನೇ ವಸಂತಕ್ಕೆ ಕಾಲಿಟ್ಟ ಭಾರತದ ಭರವಸೆಯ ಬ್ಯಾಟರ್ ಗಿಲ್.. ಪ್ರಿನ್ಸ್ ಆಟದ ದಾಖಲೆಗಳ ಒಂದು ನೋಟ..