ನವದೆಹಲಿ:ಭಾರತ ಕ್ರಿಕೆಟ್ ತಂಡ ಯಾವ ಟೂರ್ನಿಯಲ್ಲಿ ಆಡುವುದಿಲ್ಲವೋ ಅದು ಫ್ಲಾಪ್ ಷೋ ಆಗೋದು ಖಂಡಿತ. ಈ ವರ್ಷ ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಏಷ್ಯಾಕಪ್‌ನಲ್ಲಿ ಭದ್ರತಾ ಕಾರಣಗಳಿಗಾಗಿ ಭಾರತ ಭಾಗವಹಿಸಲ್ಲ ಎಂದಿತ್ತು. ಇದನ್ನು ಪಾಕಿಸ್ತಾನ ಚಾಲೆಂಜ್ ಮಾಡಿತ್ತು. ಆದರೀಗ ಟೂರ್ನಿಯೇ ಬೇರೆಡೆಗೆ ಎತ್ತಂಗಡಿ ಆಗುವ ಸಾಧ್ಯತೆ ಇದೆ. ಇದೇ ಮಾರ್ಚ್ನಲ್ಲಿ ಸ್ಥಳ ನಿಗದಿಯಾಗಲಿದೆ ಎಂದು ತಿಳಿದುಬಂದಿದೆ.
ಸರದಿಯಂತೆ ಈ ವರ್ಷ ಪಾಕಿಸ್ತಾನದಲ್ಲಿ ಏಷ್ಯಾಕಪ್ ನಡೆಯಬೇಕಿದ್ದು, ಭದ್ರತೆ ಮತ್ತು ರಾಜಕೀಯ ಕಾರಣಗಳಿಗಾಗಿ ಭಾರತ ಅಲ್ಲಿಗೆ ಪ್ರಯಾಣ ಬೆಳೆಸಲು ನಿರಾಕರಿಸಿತ್ತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ, ವರ್ಷದ ಕೊನೆಯಲ್ಲಿ ಭಾರತದಲ್ಲಿ ನಡೆಯುವ ವಿಶ್ವಕಪ್ಗೆ ನಮ್ಮ ತಂಡ ಗೈರಾಗಲಿದೆ ಎಂದು ಹೇಳಿ ಸವಾಲೆಸೆದಿತ್ತು. ಪಾಕಿಸ್ತಾನವಿಲ್ಲದೇ, ವಿಶ್ವಕಪ್ ನಡೆಸಲಿ ಎಂದು ಪಿಸಿಬಿ ಮಾಜಿ ಅಧ್ಯಕ್ಷ ರಮೀಜ್ ರಾಜಾ ಹೇಳಿದ್ದರು.
ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರೂ ಆಗಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಭಾರತ ತಂಡವಿಲ್ಲದೇ ಏಷ್ಯಾಕಪ್ ಆಡಿ ತೋರಿಸಿ ಪ್ರತಿ ಸವಾಲು ಹಾಕಿದ್ದರು. ಟೂರ್ನಿಯನ್ನು ಪಾಕಿಸ್ತಾನದ ಹೊರತಾಗಿ ಬೇರೆಡೆ ನಡೆಸಲು ಬಿಸಿಸಿಐ ಒತ್ತಡ ಹೇರಿತ್ತು. ಅದರಂತೆ ಶನಿವಾರ ಬಹ್ರೇನ್ನಲ್ಲಿ ಜಯ್ ಶಾ ಮತ್ತು ಪಿಸಿಬಿ ನೂತನ ಅಧ್ಯಕ್ಷ ನಜಮ್ ಸೇಥಿ ಮಧ್ಯೆ ನಡೆದ ಚರ್ಚೆ ಫಲಪ್ರದವಾಗಿದ್ದು, ಟೂರ್ನಿಯಲ್ಲಿ ಯುಎಇಯಲ್ಲಿ ನಡೆಸುವ ಸಾಧ್ಯತೆ ಹೆಚ್ಚಿದೆ. ಪರ್ಯಾಯ ಸ್ಥಳವನ್ನು ಮಾರ್ಚ್ನಲ್ಲಿ ನಿಗದಿಯಾಗಲಿದೆ ಎಂದು ತಿಳಿದು ಬಂದಿದೆ.
ಸಂಧಾನ ಸಭೆ:ಭಾರತ ತಂಡ ಈ ವರ್ಷದ ವೇಳಾಪಟ್ಟಿ ಬಿಡುಗಡೆ ಮಾಡಿದ್ದು, ಅದರಲ್ಲಿ ಪಾಕಿಸ್ತಾನದಲ್ಲಿ ನಡೆಯುವ ಏಷ್ಯಾಕಪ್ ಟೂರ್ನಿಯನ್ನು ಕೈಬಿಟ್ಟಿತ್ತು. ಭಾರತ ತಂಡದ ಅಲಭ್ಯತೆಯಲ್ಲಿ ಟೂರ್ನಿ ಆಯೋಜನೆ ಅಸಾಧ್ಯ ಎಂದರಿತ ಪಾಕ್ ಕ್ರಿಕೆಟ್ ಮಂಡಳಿ ಶನಿವಾರ ಸಂಧಾನ ಸಭೆ ನಡೆಸಿದೆ. ಇದರಂತೆ ಬೇರೆಡೆ ಟೂರ್ನಿ ಆಯೋಜಿಸಲು ಸಭೆಯಲ್ಲಿ ಒಮ್ಮತಕ್ಕೆ ಬರಲಾಗಿದೆ ಎಂದು ತಿಳಿದು ಬಂದಿದೆ. ಎಸಿಸಿ ಸದಸ್ಯ ರಾಷ್ಟ್ರಗಳ ಮುಖ್ಯಸ್ಥರೂ ಸಭೆಯಲ್ಲಿದ್ದರು.
ಭಾರತ-ಪಾಕ್ ವಾಗ್ಯುದ್ಧ:ಪಾಕಿಸ್ತಾನಕ್ಕೆ ಈ ಬಾರಿಯ ಏಷ್ಯಾಕಪ್ ಆಯೋಜನೆ ಹಕ್ಕು ನೀಡಲಾಗಿದೆ. ಸೆಪ್ಟೆಂಬರ್‌ನಲ್ಲಿ ಟೂರ್ನಿ ನಿಗದಿಪಡಿಸಲಾಗಿದೆ. ಆದರೆ, ಎಸಿಸಿ ಅಧ್ಯಕ್ಷ ಜಯ್ ಶಾ ಅವರು, ಕಳೆದ ಅಕ್ಟೋಬರ್‌ನಲ್ಲಿ ಉಭಯ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನಿಂದಾಗಿ ಭಾರತ, ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ಘೋಷಿಸಿದ್ದರು.