ಕ್ಯಾಂಡಿ (ಶ್ರೀಲಂಕಾ): ಏಷ್ಯಾಕಪ್ನ ಶ್ರೀಲಂಕಾದ ಬಹುತೇಕ ಪಂದ್ಯಗಳಿಗೆ ಮಳೆ ಕಾಡುವ ಸಂಭವವಿದೆ. ನಿನ್ನೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಹೈವೋಲ್ಟೇಜ್ ಪಂದ್ಯ ಕೇವಲ ಒಂದು ಇನ್ನಿಂಗ್ಸ್ ಮಾತ್ರ ಕಂಡಿದೆ. ನಾಳೆ ಭಾರತ ಮತ್ತು ನೇಪಾಳ ನಡುವಿನ ಪಂದ್ಯ ಇದೇ ಪಲ್ಲೆಕೆಲೆ ಮೈದಾನದಲ್ಲಿ ಆಡುತ್ತಿದ್ದು, ಇದಕ್ಕೂ 80 ಶೇಕಡದಷ್ಟು ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ.
ಭಾರತ ತಂಡಕ್ಕೆ ಗುಂಪು ಹಂತದ ಎರಡನೇ ಪಂದ್ಯ ಇದಾಗಿದೆ. ನಿನ್ನೆ ನಡೆದ ಪಾಕಿಸ್ತಾನದ ವಿರುದ್ಧದ ಪಂದ್ಯವೂ ನಡೆಯದ ಹಿನ್ನೆಲೆ ಒಂದೊಂದು ಅಂಕವನ್ನು ಉಭಯ ತಂಡಗಳಿಗೆ ಹಂಚಲಾಯಿತು. ನೇಪಾಳದ ವಿರುದ್ಧ ಮೊದಲ ಪಂದ್ಯದಲ್ಲಿ ಬೃಹತ್ ಮೊತ್ತದ ಜಯ ದಾಖಲಿಸಿದ ಪಾಕಿಸ್ತಾನ ತಂಡ 3 ಅಂಕದಿಂದ ಸೂಪರ್ ಫೋರ್ಗೆ ಪ್ರವೇಶ ಪಡೆದಿದೆ.
ರದ್ದಾದರೆ ಸೂಪರ್ ಫೋರ್ ಆಯ್ಕೆ ಹೇಗೆ?: ನೇಪಾಳ ಈಗಾಗಲೇ ಪಾಕಿಸ್ತಾನದ ವಿರುದ್ಧ ಸೋಲು ಕಂಡಿರುವುದರಿಂದ ಅಂಕ ಪಟ್ಟಿಯಲ್ಲಿ ಶೂನ್ಯ ಪಾಯಿಂಟ್ ಗಳಿಸಿದೆ. ಪಾಕಿಸ್ತಾನದ ವಿರುದ್ಧ ಫಲಿತಾಂಶ ರಹಿತ ಪಂದ್ಯದಿಂದ ಭಾರತ 1 ಅಂಕ ಪಡೆದುಕೊಂಡು ಎರಡನೇ ಸ್ಥಾನದಲ್ಲಿದೆ. ನೇಪಾಳ ಮತ್ತು ಭಾರತದ ನಡುವಿನ ಪಂದ್ಯ ರದ್ದಾದರೆ ಭಾರತಕ್ಕೆ ಮುಂದಿನ ಹಂತಕ್ಕೆ ಹೋಗಲು ಯಾವುದೇ ಸಮಸ್ಯೆ ಇಲ್ಲ. ನಾಳಿನ ಪಂದ್ಯ ರದ್ದಾದಲ್ಲಿ ಉಭಯ ತಂಡಕ್ಕೂ ಒಂದೊಂದು ಅಂಕ ಹಂಚಲಾಗುತ್ತದೆ. ಎರಡು ಅಂಕದಿಂದ ಭಾರತ ಸೂಪರ್ ಫೋರ್ನ ಪ್ರವೇಶ ಪಡೆಯಲಿದೆ. ಆದರೆ, ಯಾವುದೇ ಪಂದ್ಯ ಆಡದೇ ಪ್ರವೇಶ ಪಡೆದಂತಾಗಲಿದೆ.