ಪಾಕಿಸ್ತಾನದ ವಿರುದ್ಧ ವಿರಾಟ್ ಕೊಹ್ಲಿ ಮತ್ತೆ ತಾನೇ ಬಾಸ್ ಎಂದು ತೋರಿಸಿದ್ದಾರೆ. ಏಷ್ಯಾಕಪ್ನ ಭಾರತ - ಪಾಕ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅದ್ಭುತ ಶತಕದ ಇನ್ನಿಂಗ್ಸ್ ಆಡಿದರು. ರನ್ ಮಷಿನ್ ಕೊಹ್ಲಿ ಪಂದ್ಯದಲ್ಲಿ 98 ರನ್ ಪೂರೈಸಿದ ಕೂಡಲೇ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ನಲ್ಲಿ 13,000 ಪೂರೈಸಿದ ದಾಖಲೆ ಮಾಡಿದರು.
13 ಸಾವಿರ ರನ್ ಪೂರೈಸಿದ 5 ಬ್ಯಾಟರ್ ಕೊಹ್ಲಿ ಆಗಿದ್ದಾರೆ. ನಾಲ್ವರು ಆಟಗಾರರು ನಿವೃತ್ತಿ ತೆಗೆದುಕೊಂಡಿದ್ದಾರೆ. ಈಗಲೂ ಪಂದ್ಯಗಳನ್ನು ಆಡುತ್ತಿರುವ ಆಟಗಾರರಲ್ಲಿ ವಿರಾಟ್ ಮಾತ್ರ ಇದ್ದಾರೆ. ಇವರಿಗೂ ಮೊದಲು ಭಾರತದ ಪರ ಸಚಿನ್ ತೆಂಡೂಲ್ಕರ್ ಈ ಸಾಧನೆ ಮಾಡಿದ್ದರು. ಸಚಿನ್ ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಕಲೆ ಹಾಕಿದ ವಿಶ್ವದ ನಂ.1 ಆಟಗಾರ. ಅವರು ನಿವೃತ್ತಿಯ ವೇಳೆಗೆ ಏಕದಿನ ಕ್ರಿಕೆಟ್ನಲ್ಲಿ 49 ಶತಕದಿಂದ 18,426 ರನ್ ಗಳಿಸಿದ ದಾಖಲೆ ಹೊಂದಿದ್ದಾರೆ.
ಸಚಿನ್ ನಂತರ ಕುಮಾರ ಸಂಗಾಕಾರ (14234), ರಿಕ್ಕಿ ಪಾಂಟಿಂಗ್ (13704) ಮತ್ತು ಸನತ್ ಜಯಸೂರ್ಯ (13430) ಇದ್ದಾರೆ. ಈಗ ಇವರೆಲ್ಲ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ತೆಗೆದುಕೊಂಡಿರುವುದರಿಂದ ಕಿಂಗ್ ಕೊಹ್ಲಿ ಮುಂದಿನ ದಿನಗಳಲ್ಲಿ ಇವರ ಸ್ಕೋರ್ನ್ನು ಮೀರುವ ಸಾಧ್ಯತೆ ಇದೆ. ಈ ವರ್ಷ ಏಕದಿನ ವಿಶ್ವಕಪ್ ಇದ್ದು, ಫಾರ್ಮ್ನಲ್ಲಿರುವ ಕೊಹ್ಲಿ ಸತತ ರನ್ ಗಳಿಸಿದಲ್ಲಿ ಜಯಸೂರ್ಯ ಅವರ ರನ್ ದಾಖಲೆ ಪುಡಿಯಾಗಲಿದೆ. ವಿರಾಟ್ ಕೊಹ್ಲಿ ಕೇವಲ 267 ಇನ್ನಿಂಗ್ಸ್ನಿಂದ 13000 ಪೋರೈಸಿದ ದಾಖಲೆಮಾಡಿದ್ದಾರೆ.
47ನೇ ಏಕದಿನ ಶತಕ: ಏಕದಿನ ಕ್ರಿಕೆಟ್ನ 47ನೇ ಶತಕವನ್ನು ವಿರಾಟ್ ಇಂದಿನ ಪಂದ್ಯದಲ್ಲಿ ಪೂರೈಸಿದ್ದಾರೆ. ಇನ್ನಿಂಗ್ಸ್ನಲ್ಲಿ ರನ್ ಮಷಿನ್ ಕೊಹ್ಲಿ ಕೇವಲ 84 ಬಾಲ್ನಲ್ಲಿ ಶತಕ ಪೂರೈಸಿದರು. ಶತಕದ ಮೊದಲ 50 ರನ್ ಗಳಿಸಲು 55 ಬಾಲ್ಗಳನ್ನು ತೆಗೆದುಕೊಂಡರೆ, ನಂತರದ 50 ಕೇವಲ 29 ಬಾಲ್ಗಳನ್ನು ತೆಗೆದುಕೊಂಡರು. ಪಂದ್ಯದ ಅಂತ್ಯಕ್ಕೆ ವಿರಾಟ್ ಅಜೇಯ 122 ರನ್ನ ಇನ್ನಿಂಗ್ಸ್ ಆಡಿದ್ದರು.