ಕೊಲಂಬೊ (ಶ್ರೀಲಂಕಾ) :ಆಫ್ಘಾನಿಸ್ತಾನ ವಿರುದ್ಧದ ರೋಚಕ ಪಂದ್ಯದಲ್ಲಿ ಶ್ರೀಲಂಕಾ 2 ರನ್ಗಳಿಂದ ಗೆಲುವು ಸಾಧಿಸಿ ಸೂಪರ್ 4 ಹಂತ ತಲುಪಿದೆ. ಈ ಮೂಲಕ ಗುಂಪು ಹಂತದ ಎಲ್ಲ ಮುಕ್ತಾಯವಾಗಿವೆ. ಎರಡು ಗಂಪುಗಳಿಂದ ನಾಲ್ಕು ತಂಡಗಳು ಸೂಪರ್ 4ಗೆ ಎಂಟ್ರಿ ಕೊಟ್ಟಿವೆ. ಎ ಗುಂಪಿನಲ್ಲಿ ಭಾರತ, ಪಾಕಿಸ್ತಾನ, ಬಿ ಗುಂಪಿನಿಂದ ಶ್ರೀಲಂಕಾ, ಬಾಂಗ್ಲಾದೇಶ ಅರ್ಹತೆ ಪಡೆದಿವೆ. ನೇಪಾಳ ಮತ್ತು ಅಫ್ಘಾನಿಸ್ತಾನ ಟೂರ್ನಿಯಿಂದ ಹೊರಬಿದ್ದಿವೆ.
ಇಂದಿನಿಂದ ಸೂಪರ್ 4 ಹಂತ :ನಾಲ್ಕು ಬಲಿಷ್ಠ ತಂಡಗಳು ಮುಂದಿನ ಹಂತಕ್ಕೆ ಅರ್ಹತೆ ಪಡೆದಿದ್ದು, ಇಂದಿನಿಂದ ಸೂಪರ್ 4 ಪಂದ್ಯಗಳು ಆರಂಭವಾಗಲಿವೆ. ತಂಡಗಳು ತಲಾ ಮೂರು ಪಂದ್ಯಗಳನ್ನು ಆಡಲಿದ್ದು, ಅಗ್ರ 2 ಸ್ಥಾನ ಪಡೆದವರು ಫೈನಲ್ನಲ್ಲಿ ಟ್ರೋಫಿಗಾಗಿ ಕಾದಾಡಲಿದ್ದಾರೆ. ಫೈನಲ್ ಪಂದ್ಯ ಸೆ.17 ರಂದು ಕೊಲಂಬೊದಲ್ಲಿ ನಡೆಯಲಿದೆ.
ಸೂಪರ್ 4 ಹಂತದ ಇಂದಿನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಸೆಣಸಾಡಲಿವೆ. ಈ ಪಂದ್ಯ ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಬಾಂಗ್ಲಾದೇಶ ಗುಂಪು ಹಂತದಲ್ಲಿ ಆಡಿದ 2 ಪಂದ್ಯಗಳಲ್ಲಿ ತಲಾ ಒಂದು, ಸೋಲು ಗೆಲುವು ಕಂಡು ಎರಡನೇ ಸ್ಥಾನಿಯಾಗಿ ಅರ್ಹತೆ ಗಿಟ್ಟಿಸಿಕೊಂಡಿದೆ. ಎ ತಂಡದಲ್ಲಿದ್ದ ಪಾಕಿಸ್ತಾನ, ಭಾರತ ಎದುರಿನ ಪಂದ್ಯ ಮಳೆಯಿಂದ ರದ್ದಾಗಿದ್ದರೂ, ನೇಪಾಳ ವಿರುದ್ಧ ಗೆದ್ದು ಸೂಪರ್ 4ಗೆ ಬಂದಿದೆ.
ಕೊಲಂಬೊದಲ್ಲಿ ಮಳೆ ಎಚ್ಚರಿಕೆ :ಪಾಕ್ ಮತ್ತು ಬಾಂಗ್ಲಾದ ಇಂದಿನ ಪಂದ್ಯ ಹೊರತುಪಡಿಸಿ ಸೂಪರ್ ಫೋರ್ನ 5 ಪಂದ್ಯ ಮತ್ತು ಫೈನಲ್ ಸೇರಿದಂತೆ ಎಲ್ಲ ಮ್ಯಾಚ್ಗಳು ಕೊಲಂಬೊದ ಆರ್ ಪ್ರೇಮದಾಸ್ ಮೈದಾನದಲ್ಲಿ ಆಯೋಜಿಸಲಾಗಿದೆ. ಇಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಪಂದ್ಯಗಳಿಗೆ ಅಡ್ಡಿಯುಂಟಾಗುವ ಸಾಧ್ಯತೆ ಹೆಚ್ಚಿದೆ. ಮುಂದಿನ 10 ದಿನಗಳ ಕಾಲ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.