ಕೊಲಂಬೋ (ಶ್ರೀಲಂಕಾ): ಏಷ್ಯಾಕಪ್ ಏಕದಿನ ಕ್ರಿಕೆಟ್ ಟೂರ್ನಿಯ ಸೂಪರ್ ಫೋರ್‌ನಲ್ಲಿ ಇಂದು ಆತಿಥೇಯ ಶ್ರೀಲಂಕಾವನ್ನು ಬಾಂಗ್ಲಾದೇಶ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಎದುರಿಸುತ್ತಿದೆ. ಟಾಸ್ ಗೆದ್ದ ಬಾಂಗ್ಲಾದೇಶ ನಾಯಕ ಶಕೀಬ್ ಅಲ್ ಹಸನ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಸೂಪರ್ ಫೋರ್ ಹಂತದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಸೋಲು ಕಂಡಿರುವ ಬಾಂಗ್ಲಾ ಇಂದು ಪುಟಿದೇಳುವ ಭರವಸೆಯಲ್ಲಿದೆ. ಅಲ್ಲದೇ ಇದು ಬಾಂಗ್ಲಾಗೆ ಮಾಡು ಇಲ್ಲವೇ ಮಡಿ ಪಂದ್ಯ. ಈ ಮ್ಯಾಚ್ನಲ್ಲಿ ಬಾಂಗ್ಲಾದೇಶ ಸೋತರೆ ಏಷ್ಯಾಕಪ್ ಅಭಿಯಾನ ಕೊನೆಗೊಳ್ಳುವುದು ಖಚಿತ.
ನಜ್ಮುಲ್ ಹಸನ್ ಶಾಂಟೊ ಮತ್ತು ಮೆಹದಿ ಹಸನ್ ಮಿರಾಜ್ ಅವರ ಶತಕಗಳ ನೆರವಿನಿಂದ ಬಾಂಗ್ಲಾದೇಶ ಲೀಗ್ ಹಂತದಲ್ಲಿ ಅಫ್ಘಾನಿಸ್ತಾನ ವಿರುದ್ಧ ಐದು ವಿಕೆಟ್‌ಗೆ 334 ರನ್ ಗಳಿಸಿತ್ತು, ಆದರೆ, ಅದರ ನಂತರ ಬ್ಯಾಟರ್ಗಳಿಂದ ಉತ್ತಮ ಪ್ರದರ್ಶನ ಮೂಡಿ ಬರಲಿಲ್ಲ. ಬಾಂಗ್ಲಾ ಶ್ರೀಲಂಕಾ ವಿರುದ್ಧ 164 ರನ್‌ಗಳಿಗೆ ಮತ್ತು ಪಾಕಿಸ್ತಾನದ ವಿರುದ್ಧ 193 ರನ್‌ಗಳಿಗೆ ಔಟ್ ಆಗಿತ್ತು.
ಹೀಗಾಗಿ ಇಂದು ಬಾಂಗ್ಲಾ ಬ್ಯಾಟರ್ಗಳಿಗೆ ಸವಾಲಿನ ಕಣ ಆಗಿದೆ. ಗಾಯದ ಕಾರಣ ಏಷ್ಯಾಕಪ್‌ನಿಂದ ಹೊರಗುಳಿದಿರುವ ಶಾಂಟೊವನ್ನು ಬಾಂಗ್ಲಾದೇಶ ಕಳೆದುಕೊಳ್ಳಲಿದೆ. ಆದರೆ, ಲಿಟನ್ ದಾಸ್ ತಂಡವನ್ನು ಸೇರಿಕೊಂಡಿದ್ದು, ಅವರಿಂದ ಉತ್ತಮ ಪ್ರದರ್ಶನವನ್ನು ತಂಡ ನಿರೀಕ್ಷಿಸಲಿದೆ.