ಲಾಹೋರ್ (ಪಾಕಿಸ್ತಾನ): ಏಷ್ಯಾಕಪ್ನ ಸೂಪರ್ ಫೂರ್ ಹಂತಕ್ಕೆ ಅಫ್ಘಾನಿಸ್ತಾನ ಪ್ರವೇಶಿಸಬೇಕಾದರೆ 38 ಓವರ್ ಒಳಗಡೆ ಲಂಕಾ ಕೊಟ್ಟಿದ್ದ ಗುರಿಯನ್ನು ಭೇದಿಸಬೇಕಿತ್ತು. ಏಕೆಂದರೆ, ಬಾಂಗ್ಲಾದೇಶದ ಎದುರು ಸೋಲು ಕಂಡಿದ್ದರಿಂದ ಅಫ್ಘಾನ್ -1.780 ರನ್ ರೇಟ್ ಹೊಂದಿತ್ತು. ಈ ಹಿನ್ನೆಲೆಯಲ್ಲಿ ಲಂಕಾ ಬೌಲರ್ಗಳನ್ನು ಹಿನಾಮಾನವಾಗಿ ದಂಡಿಸಿದ ಅಫ್ಘಾನಿ ಬ್ಯಾಟರ್ಗಳು ಗೆಲುವಿಗೆ 37.4 ಓವರ್ನಲ್ಲಿ ಆಲ್ಔಟ್ಗೆ ಶರಣಾಗಿ 2 ರನ್ ಹಿನ್ನಡೆ ಅನುಭವಿಸಿ ಸೋಲು ಕಂಡರು. ಇದರಿಂದ ಸೂಪರ್ 4 ಹಂತಕ್ಕೆ ಶ್ರೀಲಂಕಾ ಮತ್ತು ಬಾಂಗ್ಲಾದೇಶ ಸ್ಥಾನ ಪಡೆದುಕೊಂಡಿತು.
ಲಂಕಾ ಕೊಟ್ಟಿದ್ದ 292 ರನ್ ಗುರಿಯನ್ನು ಬೆನ್ನು ಹತ್ತಿದ್ದ ಅಫ್ಘಾನಿಸ್ತಾನಕ್ಕೆ ಲಂಕಾದ ರಜಿತ್ ಆರಂಭಿಕ ಆಘಾತ ನೀಡಿದರು. 3ನೇ ಮತ್ತು 5ನೇ ಓವರ್ನಲ್ಲಿ ರಹಮಾನುಲ್ಲಾ ಗುರ್ಬಾಜ್ (4) ಮತ್ತು ಇಬ್ರಾಹಿಂ ಝದ್ರಾನ್ (7) ಅವರ ವಿಕೆಟ್ ಪಡೆದರು. ಆದರೆ ಪಟ್ಟು ಬಿಡದ ಅಫ್ಘಾನಿ ಬ್ಯಾಟರ್ಗಳು ಮೈದಾನಕ್ಕಿಳಿಯುತ್ತಿದ್ದಂತೆ ಬಿರುಸಿನ ಆಟಕ್ಕೆ ಮುಂದಾದರು. ಗುಲ್ಬದಿನ್ ನೈಬ್ ಮತ್ತು ರಹಮತ್ ಶಾ ಸ್ಕೋರ್ನ ವೇಗ ಹೆಚ್ಚಿಸಲು ನೋಡಿದರು. ಆದರೆ ಪತಿರಾಣ ಸ್ಪಿನ್ಗೆ ನೈಬ್ ಎಲ್ಬಿಡಬ್ಲ್ಯೂಗೆ ಶರಣಾಗಬೇಕಾಯಿತು. 40 ಬಾಲ್ನಲ್ಲಿ 45 ರನ್ ಗಳಸಿ ಆಡುತ್ತಿದ್ದ ರೆಹಮತ್ ಶಾ ವಿಕೆಟ್ನ್ನು ರಜಿತ್ ಪಡೆದರು.
ಮೊಹಮ್ಮದ್ ನಬಿ ಮತ್ತು ಹಶ್ಮತುಲ್ಲಾ ಶಾಹಿದಿ ಬಲಿಷ್ಠ ಹೋರಾಟವನ್ನು ತೋರಿದರು. ನಬಿ ಲಂಕಾ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದರು. ಕೇವಲ 32 ಬಾಲ್ ಎದುರಿಸಿದ ಅವರು 5 ಸಿಕ್ಸ್ ಮತ್ತು 6 ಬೌಂಡರಿಯ ಸಹಾಯದಿಂದ 65 ರನ್ ಕಲೆಹಾಕಿದರು. ಇವರ ಭರ್ಜರಿ ಆಟದ ನೆರವಿನಿಂದ 38 ಓವರ್ ಒಳಗೇ ಪಂದ್ಯವನ್ನು ಅಫ್ಘಾನ್ ಯಾವುದೇ ಪ್ರಯಾಸವಿಲ್ಲದೇ ಗೆಲ್ಲುವಂತಿತ್ತು. ಆದರೆ, 32ನೇ ಬಾಲ್ನಲ್ಲಿ ಸಿಕ್ಸ್ ಗಳಿಸುವ ಪ್ರಯತ್ನದಲ್ಲಿ ತೀಕ್ಷ್ಣನ ಬೌಲ್ನಲ್ಲಿ ಕ್ಯಾಚ್ ಇತ್ತರು.