ನವದೆಹಲಿ :ಏಷ್ಯಾಕಪ್ ಪಂದ್ಯಗಳನ್ನು ಆಯೋಜಿಸಲು ರಾಷ್ಟ್ರಗಳು ನಿಗದಿಯಾಗಿದ್ದರೂ ಗೊಂದಲಗಳು ಮಾತ್ರ ಮುಗಿದಿಲ್ಲ. ಈ ಬಾರಿ ಏಷ್ಯಾಕಪ್ ಆತಿಥ್ಯವನ್ನು ಪಾಕಿಸ್ತಾನ ವಹಿಸಿದ್ದು, ಭದ್ರತಾ ನೆಪವೊಡ್ಡಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣ ಮಾಡಲು ನಿರಾಕರಿಸಿತ್ತು. ಬಳಿಕ ನಡೆದ ಚರ್ಚೆಗಳಲ್ಲಿ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ತೆಗೆದುಕೊಂಡ ಪಂದ್ಯಗಳ ವಿತರಣಾ ಒಪ್ಪಿಗೆಯಂತೆ ಇಂಡೋ ಮತ್ತು ಪಾಕ್ ನಡುವಣ ಬಹು ನಿರೀಕ್ಷಿತ ಏಷ್ಯಾಕಪ್ ಪಂದ್ಯ ಶ್ರೀಲಂಕಾದಲ್ಲಿ ನಡೆಯಲಿದೆ ಎಂದು ಐಪಿಎಲ್ ಅಧ್ಯಕ್ಷ ಅರುಣ್ ಸಿಂಗ್ ಧುಮಾಲ್ ಬುಧವಾರ ಖಚಿತಪಡಿಸಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಜೊತೆಗಿನ ಸಭೆಗಾಗಿ ದಕ್ಷಿಣ ಆಫ್ರಿಕದ ಡರ್ಬನ್‌ನಲ್ಲಿರುವ ಧುಮಾಲ್ ಅವರು, ಏಷ್ಯಾಕಪ್ ವೇಳಾಪಟ್ಟಿಯನ್ನು ಅಂತಿಮಗೊಳಿಸಲು ನಾಳೆ ಗುರುವಾರ ಐಸಿಸಿ ಜೊತೆ ಸಭೆಗೂ ಮುನ್ನ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಮತ್ತು ಪಿಸಿಬಿ ನೂತನ ನಿರ್ವಹಣಾ ಸಮಿತಿ ಅಧ್ಯಕ್ಷ ಝಾಕಾ ಅಶ್ರಫ್ ಭೇಟಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಈ ತಿಂಗಳ ಆರಂಭದಲ್ಲಿ ಪಿಸಿಬಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಅಶ್ರಫ್, ಈ ಹಿಂದೆ ಪಿಸಿಬಿ ಅಧ್ಯಕ್ಷರಾಗಿದ್ದ ನಜಮ್ ಸೇಥಿ ಒಪ್ಪಿಗೆ ಸೂಚಿಸಿರುವ ಹೈಬ್ರಿಡ್ ಕ್ರಿಕೆಟ್ ಮಾದರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಗಸ್ಟ್ 31 ರಿಂದ ಸೆಪ್ಟೆಂಬರ್ 17 ರವರೆಗೆ ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಏಷ್ಯಾಕಪ್ ಪಂದ್ಯಾವಳಿಗಳನ್ನು ಆಯೋಜನೆ ಮಾಡುವ ಹಕ್ಕನ್ನು ಪಿಸಿಬಿ ಹೊಂದಿದೆ. ನಮ್ಮ ಕಾರ್ಯದರ್ಶಿ ಪಿಸಿಬಿ ಮುಖ್ಯಸ್ಥ ಅಶ್ರಫ್ ಭೇಟಿ ಮಾಡಿದ್ದು, ಏಷ್ಯಾ ಕಪ್ ವೇಳಾಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.