ಕೊಲಂಬೊ (ಶ್ರೀಲಂಕಾ): ಏಷ್ಯಾಕಪ್ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಭಾರತ ತಂಡದ ಆಟಗಾರರು ಒಂದೊಂದೆ ದಾಖಲೆಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಇಂದು (ಮಂಗಳವಾರ) ಶ್ರೀಲಂಕಾ ವಿರುದ್ಧ ಭಾರತ ಪಂದ್ಯವನ್ನಾಡುತ್ತಿದ್ದು, ಭಾರತ ತಂಡದ ನಾಯಕ ಹಾಗೂ ಸ್ಟಾರ್ ಬ್ಯಾಟರ್ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ 10,000 ರನ್ ಪೂರೈಸಿದ ಆರನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧ ಏಷ್ಯಾಕಪ್ 2023ರಲ್ಲಿ ಭಾರತದ ಸೂಪರ್ 4ರ ಎರಡನೇ ಪಂದ್ಯವನ್ನು ಆಡುತ್ತಿದೆ. ಇದೇ ಮೈದಾನದಲ್ಲಿ ನಿನ್ನೆ ವಿರಾಟ್ ಕೊಹ್ಲಿ ಪಾಕಿಸ್ತಾನದ ವಿರುದ್ಧ ಅತಿ ವೇಗದ 13,000 ರನ್ ಪೂರೈಸಿದ ಸಾಧನೆ ಮಾಡಿದ್ದರು. ಇಂದಿನ ಪಂದ್ಯದಲ್ಲಿ ರೋಹಿತ್ ಶರ್ಮಾ 22 ರನ್ ಗಳಿಸುತ್ತಿದ್ದಂತೆ ಈ ದಾಖಲೆ ಬರೆದಿದ್ದಾರೆ.
ದೇಶೀಯ ಕ್ರಿಕೆಟ್‌ನಲ್ಲಿ ಮುಂಬೈ ಪರ ಆಡುತ್ತಿರುವ ರೋಹಿತ್ ಶರ್ಮಾ, ಏಕದಿನದಲ್ಲಿ 10,000 ರನ್ ಗಳಿಸಿದ ಎರಡನೇ ವೇಗದ ಬ್ಯಾಟರ್ ಎನಿಸಿಕೊಂಡರು. ರೋಹಿತ್ ತಮ್ಮ ವೃತ್ತಿಜೀವನದ ಕೇವಲ 241 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ. 205 ಇನ್ನಿಂಗ್ಸ್‌ಗಳಲ್ಲಿ ವಿರಾಟ್ ಕೊಹ್ಲಿ ಹತ್ತು ಸಹಸ್ರ ರನ್ ಮೈಲಿಗಲ್ಲನ್ನು ದಾಟಿದ ದಾಖಲೆ ಮಾಡಿದ್ದರು. ವಿರಾಟ್ ಮತ್ತು ರೋಹಿತ್ ಈಗ ಈ ಸಾಧನೆ ಮಾಡಿದ ಸಕ್ರಿಯ ಆಟಗಾರರಾಗಿದ್ದಾರೆ.
ಈ ಪಟ್ಟಿಯಲ್ಲಿ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ (18,426) ಮೊದಲ ಸ್ಥಾನದಲ್ಲಿದ್ದಾರೆ. 10,000 ಏಕದಿನ ಕ್ರಿಕೆಟ್ ರನ್ ಪೂರೈಸಿದ ಇತರ ಭಾರತೀಯ ಬ್ಯಾಟರ್‌ಗಳೆಂದರೆ ವಿರಾಟ್ ಕೊಹ್ಲಿ (13024), ಭಾರತದ ಮಾಜಿ ನಾಯಕ ಮತ್ತು ಆರಂಭಿಕ ಸೌರವ್ ಗಂಗೂಲಿ (11,363), ಭಾರತದ ಮಾಜಿ ಬ್ಯಾಟರ್ ಮತ್ತು ಪ್ರಸ್ತುತ ಮುಖ್ಯ ಕೋಚ್ ರಾಹುಲ್ ದ್ರಾವಿಡ್ (10889), ಮಾಜಿ ವಿಕೆಟ್ ಕೀಪರ್ ಬ್ಯಾಟರ್ ಎಂಎಸ್ ಧೋನಿ (10,773).
ಶ್ರೀಲಂಕಾದ ಮಾಜಿ ಆಟಗಾರರಾದ ಸನತ್ ಜಯಸೂರ್ಯ (13,430), ಕುಮಾರ್ ಸಂಗಕ್ಕಾರ (14,234), ಮತ್ತು ಮಹೇಲ ಜಯವರ್ಧನೆ (12,650), ಪಾಕಿಸ್ತಾನದ ಮಾಜಿ ಬ್ಯಾಟರ್ ಇಂಜಮಾಮ್-ಉಲ್-ಹಕ್ (11,739), ದಕ್ಷಿಣ ಆಫ್ರಿಕಾದ ಮಾಜಿ ಆಲ್‌ರೌಂಡರ್ ಜಾಕ್ವೆಸ್ ಕಾಲಿಸ್ (11,579), ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ (13,704) ಮತ್ತು ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ (10,480) ಮತ್ತು ವೆಸ್ಟ್ ಇಂಡೀಸ್‌ನ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಬ್ರಿಯಾನ್ ಲಾರಾ (10,405) ಏಕದಿನದಲ್ಲಿ 10,000 ರನ್ ಕ್ಲಬ್‌ನಲ್ಲಿರುವ ಇತರ ಅಂತಾರಾಷ್ಟ್ರೀಯ ಆಟಗಾರರಾಗಿದ್ದಾರೆ.
ಶ್ರೀಲಂಕಾ ವಿರುದ್ಧ 264 ರನ್‌ಗಳ ಗರಿಷ್ಠ ವೈಯಕ್ತಿಕ ಸ್ಕೋರ್ ಹೊಂದಿರುವ ರೋಹಿತ್ ಶರ್ಮಾ, ಏಕದಿನ ಕ್ರಿಕೆಟ್‌ನಲ್ಲಿ ಮೂರು ದ್ವಿಶತಕಗಳನ್ನು ಗಳಿಸಿದ ವಿಶ್ವದ ಏಕೈಕ ಆಟಗಾರ ಆಗಿದ್ದಾರೆ. ರೋಹಿತ್ ಶರ್ಮಾ ಏಕದಿನದಲ್ಲಿ ಭಾರತದ ಪರ ಅತಿ ಹೆಚ್ಚು ಸಿಕ್ಸರ್ (285) ಸಿಡಿಸಿದ ಆಟಗಾರ. ಶರ್ಮಾ 26 ಜುಲೈ 2007 ರಂದು ಐರ್ಲೆಂಡ್ ವಿರುದ್ಧ ತಮ್ಮ ಚೊಚ್ಚಲ ಏಕದಿನ ಪಂದ್ಯವನ್ನು ಆಡಿದರು. 2022ರ ಏಷ್ಯಾಕಪ್ನಲ್ಲಿ ಭಾರತ ತಂಡದ ನಾಯಕತ್ವ ವಹಿಸಿಕೊಂಡರು.
ಇದನ್ನೂ ಓದಿ:IND vs SL: ಟಾಸ್ ಗೆದ್ದ ರೋಹಿತ್ ಬ್ಯಾಟಿಂಗ್ ಆಯ್ಕೆ.. ಅಖಾಡದಲ್ಲಿ ತ್ರಿವಳಿ ಸ್ಪಿನ್ನರ್ಗಳು