ಮುಲ್ತಾನ್ (ಪಾಕಿಸ್ತಾನ) : ಏಷ್ಯಾಕಪ್ 2023ರ ಮೊದಲ ಪಂದ್ಯದಲ್ಲಿ ನೇಪಾಳ ವಿರುದ್ಧ ಪಾಕಿಸ್ತಾನ 238 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಈ ಮೂಲಕ ಏಕದಿನ ಕ್ರಿಕೆಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನಿ ಪಾಕ್ ತಂಡ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಪಾಕಿಸ್ತಾನ ನೀಡಿದ್ದ 342 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಕ್ರಿಕೆಟ್ ಶಿಶು ನೇಪಾಳ, 104 ರನ್‌ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು.
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ, ಆರಂಭಿಕ ಆಘಾತ ಎದುರಿಸಿತು. ಆರಂಭಿಕ ಆಟಗಾರರಾದ ಫಕರ್ ಜಮನ್ ಮತ್ತು ಇಮಾಮ್ ಉಲ್ ಹಕ್ ಅಲ್ಪ ಮೊತ್ತಕ್ಕೆ ಪೆವಿಲಿಯನ್ ಪರೇಡ್ ನಡೆಸಿದರು. ಫಕರ್ 14 ರನ್ ಗಳಿಸಿ ಕರನ್ ಅವರಿಗೆ ವಿಕೆಟ್ ಒಪ್ಪಿಸಿದರೆ, ಇಮಾಮ್ ಉಲ್ ಹಕ್ 5 ರನ್ ಗಳಿಸಿ ರನೌಟ್ ಆದರು.
ಬಳಿಕ ಬಂದ ಸ್ಪೋಟಕ ಬ್ಯಾಟರ್ ಬಾಬರ್ ಆಜಮ್ ಪಾಕಿಸ್ತಾನವು ಗರಿಷ್ಟ ಮೊತ್ತ ದಾಖಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಆಜಂ 131 ಎಸೆತದಲ್ಲಿ 4 ಸಿಕ್ಸರ್ ಹಾಗೂ 14 ಬೌಂಡರಿಗಳ ಸಹಾಯದಿಂದ 151 ರನ್ ಗಳಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ಮೊಹಮ್ಮದ್ ರಿಜ್ವಾನ್ 44 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಈಫ್ತಿಕಾರ್ ಅಹ್ಮದ್ 71 ಎಸೆತದಲ್ಲಿ 4 ಸಿಕ್ಸರ್ ಮತ್ತು 11 ಬೌಂಡರಿ ಸಹಾಯದಿಂದ 109 ರನ್ ಗಳಿಸಿದರು. ಈ ಮೂಲಕ ಪಾಕಿಸ್ತಾನ ತಂಡವು 6 ವಿಕೆಟ್ ನಷ್ಟಕ್ಕೆ 342 ರನ್ ಗಳಿಸಿ ಸವಾಲಿನ ಮೊತ್ತ ಪೇರಿಸಿತು. ನೇಪಾಳ ಪರ ಸೋಮ್ಪಾಲ್ ಕಾಮಿ 85/2 , ಕರಣ್ ಕೆಸಿ ಮತ್ತು ಸಂದೀಪ್ ತಲಾ 1 ವಿಕೆಟ್ ಪಡೆದರು.