ಕೊಲಂಬೋ (ಶ್ರೀಲಂಕಾ):ಏಷ್ಯಾ ಕಪ್ ಟೂರ್ನಿಯ ಫೈನಲ್ಗೆ ಶ್ರೀಲಂಕಾ ತಂಡ ಲಗ್ಗೆ ಇಟ್ಟಿದೆ. ಗುರುವಾರ ನಡೆದ ಸೂಪರ್ 4 ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ರೋಚಕ ಗೆಲುವು ದಾಖಲಿಸಿದೆ. ಫೈನಲ್ ಪಂದ್ಯದಲ್ಲಿ ಟ್ರೋಫಿಗಾಗಿ ಭಾರತದ ಎದುರು ಲಂಕಾ ಸೆಣಸಲಿದೆ.
ಸೆಮಿಫೈನಲ್ ಎಂದೇ ಬಿಂಬಿತವಾಗಿದ್ದ ಪಾಕಿಸ್ತಾನ ಹಾಗೂ ಶ್ರೀಲಂಕಾ ನಡುವಿನ ಐದನೇ ಸೂಪರ್ 4 ಪಂದ್ಯಕ್ಕೆ ಆರಂಭದಲ್ಲೇ ಮಳೆ ಅಡ್ಡಿ ಪಡಿಸಿತ್ತು. ಇದರಿಂದ ಪಂದ್ಯ ಆರಂಭ ವಿಳಂಬವಾಗಿ 42 ಓವರ್ಗಳಿಗೆ ಸೀಮಿತಗೊಳಿಸಲಾಗಿತ್ತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ಏಳು ವಿಕೆಟ್ ನಷ್ಟಕ್ಕೆ 252 ರನ್ ಪೇರಿಸಿತ್ತು. ಈ ಸವಾಲಿನ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡ ಎಂಟು ವಿಕೆಟ್ ಕಳೆದುಕೊಂಡು ಕೊನೆಯ ಎಸೆತದಲ್ಲಿ ಗೆಲುವಿನ ನಗೆ ಬೀರಿತು.
ಲಂಕಾ ಇನ್ನಿಂಗ್ಸ್ ಆರಂಭಿಸಿದ ಪತುಮ್ ನಿಸ್ಸಂಕಾ ಮತ್ತು ಕುಸಲ್ ಪೆರೇರಾ ತಂಡಕ್ಕೆ ಅಷ್ಟೇನು ಉತ್ತಮ ಆರಂಭ ಒದಗಿಸಲಿಲ್ಲ. ಇಬ್ಬರೂ ಆರಂಭಿಕರು ಬಹಳ ಬೇಗನೆ ಔಟಾದರು. ಬಿರುಸಿನ ಬ್ಯಾಟ್ ಬೀಸಿದ ಪೆರೇರಾ 8 ಎಸೆತಗಳಲ್ಲಿ 4 ಬೌಂಡರಿಯೊಂದಿಗೆ 17 ಗಳಿಸಿ ಶಾದಾಬ್ ಖಾನ್ ರನೌಟ್ ಬಲೆಗೆ ಸಿಲುಕಿದರು. ನಿಧಾನಗತಿ ಬ್ಯಾಟ್ ಮಾಡಿದ ನಿಸ್ಸಂಕಾ 44 ಬಾಲ್ಗಳಲ್ಲಿ 29 ರನ್ಗೆ ಶಾದಾಬ್ ಖಾನ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು.