ಕೊಲಂಬೊ (ಶ್ರೀಲಂಕಾ): ಏಷ್ಯಾಕಪ್ ಫೈನಲ್‌ನಲ್ಲಿ ಸ್ಥಾನ ಪಡೆಯಲು ಗುರುವಾರ ಇಲ್ಲಿನ ಆರ್ ಪ್ರೇಮದಾಸ ಕ್ರಿಡಾಂಗಣದಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನದ ನಡುವೆ ಹಣಾಹಣಿ ನಡೆಯಲಿದೆ. ಎರಡೂ ತಂಡಕ್ಕೆ ಫೈನಲ್‌ನಲ್ಲಿ ಸ್ಥಾನ ಪಡೆಯಲು ಈ ಪಂದ್ಯದ ಗೆಲುವು ಅನಿವಾರ್ಯ ಆಗಿರುವುದರಿಂದ ಇದನ್ನು ಸೆಮಿಫೈನಲ್ ರೀತಿ ನೋಡಲಾಗುತ್ತಿದೆ. ಪಾಕಿಸ್ತಾನ ಗೆದ್ದು ಫೈನಲ್ಗೆ ಬಂದಲ್ಲಿ ಮತ್ತೆ ಭಾರತದೊಂದಿಗೆ ಸೆಣಸಾಟ ನಡೆಸಬೇಕಿದೆ. ಹೀಗಾಗಿ ಕ್ರಿಕೆಟ್ ಅಭಿಮಾನಿಗಳ ಕಣ್ಣು ಈ ಪಂದ್ಯದ ಮೇಲೆಯೇ ನೆಟ್ಟಿದೆ.
ಪಾಕಿಸ್ತಾನ ತಂಡದಲ್ಲಿ ಗಾಯದಿಂದ ಇಬ್ಬರು ಬೌಲರ್ಗಳು ಅಲಭ್ಯರಾಗಿದ್ದು, ಆ ಜಾಗದಲ್ಲಿ ಹೊಸಬರನ್ನು ಆಡಿಸುತ್ತಿದ್ದಾರೆ. ಅನುಭವಿ ಸ್ಟಾರ್ ವೇಗಿಳಗಳ ಕೊರತೆಯನ್ನು ಎದುರಿಸುತ್ತಿರುವ ಪಾಕಿಸ್ತಾನವನ್ನು ಸುಲಭವಾಗಿ ಕಟ್ಟಿಹಾಕುವ ಚಿಂತನೆಯಲ್ಲಿ ಶ್ರೀಲಂಕಾ ಇದೆ. ಆದರೆ, ಪಾಕಿಸ್ತಾನ ಶಾಬಾದ್ ಖಾನ್ ಸ್ಪಿನ್ನಲ್ಲಿ ಮತ್ತು ಶಾಹೀನ್ ಶಾ ಅಫ್ರಿದಿ ವೇಗದ ಬೌಲಿಂಗ್ ವಿಭಾಗದಲ್ಲಿ ತಮ್ಮ ಅನುಭವವನ್ನು ದಾರೆ ಎರೆಯಲಿದ್ದಾರೆ.
ಪಾಕಿಸ್ತಾನ ತಂಡ ಬಾಂಗ್ಲಾವನ್ನು ತವರಿನ ಲಾಹೋರ್ ಮೈದಾನದಲ್ಲಿ ರೌಫ್ ಮತ್ತು ನಸೀಮ್ ಶಾ ಅವರ ಬೌಲಿಂಗ್ನ ಸಹಾಯದಿಂದ 193ಕ್ಕೆ ಆಲ್ಔಟ್ ಮಾಡಿ, ಸುಲಭವಾಗಿ ಜಯಿಸಿತ್ತು. ಆದರೆ, ಭಾರತದ ವಿರುದ್ಧ ನಡೆದ ಪಂದ್ಯದಲ್ಲಿ 357 ರನ್ ಬೃಹತ್ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ 128ಕ್ಕೆ ಆಲ್ಔಟ್ ಆಗಿ 228 ರನ್ ಬೃಹತ್ ಅಂತರದ ಸೋಲು ಕಂಡಿತ್ತು.
ಇತ್ತ ಶ್ರೀಲಂಕಾ ಸಹ ಬಾಂಗ್ಲಾದೇಶವನ್ನು 21 ರನ್ನಿಂದ ಗೆದ್ದುಕೊಂಡಿತ್ತು. ನಿನ್ನೆ (ಮಂಗಳವಾರ)ಲಂಕಾ ತನ್ನ ಪ್ರಬಲ ಸ್ಪಿನ್ ದಾಳಿಯಿಂದ ಭಾರತವನ್ನು 213ಕ್ಕೆ ಆಲ್ಔಟ್ ಮಾಡಿ ಸಾಧಾರಣ ಗುರಿಯನ್ನು ಪಡೆದುಕೊಂಡಿತ್ತು. ಈ ಗುರಿಯನ್ನು ಬೆನ್ನು ಹತ್ತಿದ ಶ್ರೀಲಂಕಾ 172ಕ್ಕೆ ಸರ್ವಪತನ ಕಂಡು 41 ರನ್ನಿಂದ ಸೋಲು ಕಂಡಿತ್ತು. ಹೀಗಾಗಿ ಪಾಕಿಸ್ತಾನ ಮತ್ತು ಶ್ರೀಲಂಕಾ ಅಂಕಪಟ್ಟಿಯಲ್ಲಿ ಎರಡು ಅಂಕ ಗಳಿಸಿಕೊಂಡಿದೆ. ಹೀಗಾಗಿ ಗೆದ್ದವರಿಗೆ ಫೈನಲ್ ಟಿಕೆಟ್ ಸಿಗಲಿದೆ.