ಮುಲ್ತಾನ್ (ಪಾಕಿಸ್ತಾನ):ಏಕದಿನ ಕ್ರಿಕೆಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿರುವ ಪಾಕಿಸ್ತಾನ ತಂಡ ಕ್ರಿಕೆಟ್ ಶಿಶು ನೇಪಾಳದ ಮೇಲೆ ಸವಾರಿ ನಡೆಸಿದೆ. ನಾಯಕ ಬಾಬರ್ ಆಜಮ್ ಮತ್ತು ಇಫ್ತಿಕರ್ ಅಹಮದ್ ಅವರ ಶತಕದಾಟದ ನೆರವಿನಿಂದ ನೇಪಾಳಕ್ಕೆ 343 ರನ್‌ಗಳ ಬೃಹತ್ ಗುರಿ ನೀಡಿತು.
ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿಂದು ಪಾಕಿಸ್ತಾನ- ನೇಪಾಳ ಮುಖಾಮುಖಿಯಾಗಿದೆ. ಟಾಸ್ ಗೆದ್ದ ಪಾಕ್ ನಾಯಕ ಬಾಬರ್, ಶುಷ್ಕ ಪಿಚ್ನಲ್ಲಿ ಮೊದಲು ಹೆಚ್ಚು ರನ್ ಗಳಿಸಬಹುದು ಎಂಬ ಲೆಕ್ಕಾಚಾರದಲ್ಲಿ ಬ್ಯಾಟಿಂಗ್ ಆಯ್ದುಕೊಂಡರು. ಈ ಲೆಕ್ಕಾಚಾರದಂತೆ ಪಾಕಿಸ್ತಾನ 6 ವಿಕೆಟ್ ನಷ್ಟಕ್ಕೆ 342 ರನ್ ಪೇರಿಸಿತು.
ಮೊದಲ ಬಾರಿಗೆ ಏಷ್ಯಾಕಪ್ಗೆ ಪಾದಾರ್ಪಣೆ ಮಾಡಿರುವ ನೇಪಾಳ, ಆರಂಭಿಕ 10 ಓವರ್ಗಳಲ್ಲಿ ತಮ್ಮ ಪ್ರಾಬಲ್ಯ ಸಾಧಿಸಿತು. 6ನೇ ಓವರ್ನಲ್ಲಿ 14 ರನ್‌ಗಳಿಸಿ ಆಡುತ್ತಿದ್ದ ಫಕರ್ ಜಮಾನ್ ವಿಕೆಟ್ ಅನ್ನು ಕರಣ್ ಕೆ.ಸಿ. ಪಡೆದರು. ಮೂರನೇ ವಿಕೆಟ್ ಆಗಿ ಕ್ರೀಸ್‌ಗೆ ಬಂದ ಬಾಬರ್ ಮತ್ತು ಇಮಾಮ್ ಉಲ್ ಹಕ್ ನಡುವೆ ಓಟದ ವೇಳೆ ನಡೆದ ಗೊಂದಲದಲ್ಲಿ ಉಲ್ ಹಕ್ ರನ್ ಔಟ್ಗೆ ಬಲಿಯಾದರು. ನಂತರ ಬಂದ ಮಹಮ್ಮದ್ ರಿಜ್ವಾನ್ ನಾಯಕನೊಂದಿಗೆ ಉತ್ತಮ ಜೊತೆಯಾಟ ಕಟ್ಟಿದರು. ಮೊದಲ ಪವರ್ ಪ್ಲೇಯನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ತಂಡ ಎಡವಿತು. 10 ಓವರ್ ವಿಕೆಟ್ ಕಳೆದುಕೊಂಡು 44 ರನ್ ಮಾತ್ರ ಗಳಿಸಿತು.
ಮುಂದಿನ ಹತ್ತು ಓವರ್ನಲ್ಲಿ ಪಾಕ್ ವಿಕೆಟ್ ಕೊಡದಿದ್ದರೂ ನೇಪಾಳದ ಸ್ಪಿನ್ನರ್ಗಳ ಮುಂದೆ ರನ್ ಗಳಿಸಲು ಪರದಾಡಿತು. 20 ಓವರ್‌ಗಳ ವೇಳೆಗೆ 2 ವಿಕೆಟ್ಗೆ 91 ರನ್ ಕಲೆಹಾಕಿತು. ಅಂದರೆ 10 ಓವರ್‌ಗಳ ನಂತರ 47 ರನ್ ಮಾತ್ರ ಸೇರಿಸಲು ಸಾಧ್ಯವಾಯಿತು. 24ನೇ ಓವರ್ನಲ್ಲಿ 44 ರನ್ ಗಳಿಸಿದ್ದ ರಿಜ್ವಾನ್ ರನ್ಔಟ್ಗೆ ಬಲಿಯಾದರು. 4ನೇ ವಿಕೆಟ್ ಆಗಿ ಬಂದ ಸಲ್ಮಾನ್ 5 ರನ್ಗೆ ವಿಕೆಟ್ ಕೊಟ್ಟರು.