ಕೊಲಂಬೊ (ಶ್ರೀಲಂಕಾ): ಏಷ್ಯಾಕಪ್ನ ಸೂಪರ್ ಫೋರ್ ಹಂತದಲ್ಲಿ ಭಾರತಕ್ಕೆ ಮೊದಲ ಎದುರಾಳಿ ಪಾಕಿಸ್ತಾನ ಆಗಿದ್ದು, ಗುಂಪು ಪಂದ್ಯಗಳ ಹಂತದಲ್ಲಿ ಆದಂತೆ ಮಳೆ ಅಡ್ಡಿ ಆದರೂ ಮೀಸಲು ಪಂದ್ಯ ನಡೆಯುವ ಭರವಸೆ ಇದೆ. ಎಂಟು ದಿನದ ಅಂತರದಲ್ಲಿ ಸಾಂಪ್ರದಾಯಿಕ ಎದುರಾಳಿಗಳು ಮತ್ತೊಮ್ಮೆ ಮುಖಾಮುಖಿ ಆಗುತ್ತಿವೆ. ಆದರೆ, ಈಗ ಭಾರತ ಆಡುವ ಹನ್ನೊಂದರ ಬಳಗದಲ್ಲಿ ಕಿಶನ್ ಮತ್ತು ಕೆಎಲ್ ರಾಹುಲ್ ಆಯ್ಕೆಯ ಮೇಲೆ ಗೊಂದಲ ಉಂಟಾಗಲಿದೆ.
ಗುಂಪು ಹಂತದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಮೇಲಿನ ಹಂತದ ಬ್ಯಾಟಿಂಗ್ ಕುಸಿತ ಕಂಡರೂ ಇಶಾನ್ ಕಿಶನ್ ಉತ್ತಮ ಬ್ಯಾಟಿಂಗ್ ಮಾಡಿದ್ದರು. ಹೀಗಾಗಿ ನಾಳೆ ನಡೆಯುವ ಪಂದ್ಯದಲ್ಲಿ ಕಿಶನ್ ಬಿಟ್ಟು ಆಡಿಸಲು ಸಮಸ್ಯೆ ಆಗಲಿದೆ. ಅಲ್ಲದೇ ಕಿಶನ್ ಕಳೆದ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಸತತ 3 ಪಂದ್ಯಗಳಲ್ಲಿ ಅರ್ಧಶತಕಗಳನ್ನು ಗಳಿಸಿ ಉತ್ತಮ ಫಾರ್ಮ್ನ್ನು ಕಂಡುಕೊಂಡಿದ್ದಾರೆ. ಹೀಗಾಗಿ ಚೇತರಿಸಿಕೊಂಡು ತಂಡ ಸೇರಿರುವ ರಾಹುಲ್ಗೆ ಈ ಪಂದ್ಯದಲ್ಲಿ ಸ್ಥಾನ ಸಿಗುವುದೇ ಎಂಬ ಪ್ರಶ್ನೆ ಎದುರಾಗಿದೆ. ಅಲ್ಲದೇ ಜಸ್ಪ್ರಿತ್ ಬುಮ್ರಾ ಸಹ ತವರಿಗೆ ಬಂದವರು ಲಂಕಾಗೆ ಮರಳಿದ್ದು, ಹೀಗಾಗಿ ತಂಡದಲ್ಲಿ ಶಮಿಯನ್ನು ಕೈ ಬಿಡುವ ಸಾಧ್ಯತೆ ಇದೆ.
ಕಳೆದ ಪಲ್ಲೆಕೆಲೆ ಪಂದ್ಯದಲ್ಲಿ ಭಾರತ ಅಗ್ರಕ್ರಮಾಂಕದ ಬ್ಯಾಟರ್‌ಗಳಾದ ರೋಹಿತ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ವೈಫಲ್ಯ ಕಂಡಿದ್ದರು. ಪಾಕ್ ಬೌಲರ್‌ಗಳಾದ ಶಾಹೀನ್ ಆಫ್ರಿದಿ, ನಸೀಂ ಷಾ ಹಾಗೂ ಹ್ಯಾರಿಸ್ ರೌಫ್ ಭಾರತದ 10 ವಿಕೆಟ್ಗಳನ್ನು ಪಡೆದುಕೊಂಡಿದ್ದರು. ಪ್ರೇಮದಾಸ ಕ್ರೀಡಾಂಗಣದಲ್ಲಿ ವಿರಾಟ್ ದಾಖಲೆ ಉತ್ತಮವಾಗಿದ್ದು, ನಾಳೆ ಕೊಹ್ಲಿಯ ಆಟದ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿದೆ.
ಪಾಕಿಸ್ತಾನದಲ್ಲಿ ಬಾಬರ್ ಅಜಮ್, ಫಾಕರ್ ಜಮಾನ್, ಇಮಾಮ್ ಉಲ್ ಹಕ್, ಮಹಮ್ಮದ್ ರಿಜ್ವಾನ್ ಮತ್ತು ಇಫ್ತಿಕರ್ ಅಹ್ಮದ್ ಫಾರ್ಮ್ನಲ್ಲಿದ್ದಾರೆ. ಇವರನ್ನು ಕಟ್ಟಿಹಾಕಲು ತಂತ್ರ ರೂಪಿಸಬೇಕಿದೆ. ನೇಪಾಳದ ವಿರುದ್ಧ ಇಫ್ತಿಕರ್ ಮತ್ತು ಬಾಬರ್ ಉತ್ತಮವಾಗಿ ಆಡಿದ್ದರೆ, ಸೂಪರ್ ಫೋರ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಇಮಾಮ್ ಉಲ್ ಹಕ್, ಮಹಮ್ಮದ್ ರಿಜ್ವಾನ್ ಮಿಂಚಿದ್ದರು. ಭಾರತಕ್ಕೆ ಈ ನಾಲ್ವರು ಕಾಡುವ ಸಾಧ್ಯತೆ ಇದೆ.