ಕೊಲಂಬೊ (ಶ್ರೀಲಂಕಾ): ಕಳೆದ ವಾರ ಮಳೆಯಿಂದ ಭಾರತ - ಪಾಕಿಸ್ತಾನ ಪಂದ್ಯ ರದ್ದಾಗಿತ್ತು. ಈಗ ಏಷ್ಯಾಕಪ್ನ ಸೂಪರ್ ಫೋರ್ ಹಂತದಲ್ಲಿ ಎರಡು ತಂಡಗಳು ಮತ್ತೆ ಮುಖಾಮುಖಿ ಆಗುತ್ತಿದ್ದು, ಟಾಸ್ ಗೆದ್ದ ಪಾಕಿಸ್ತಾನ ನಾಯಕ ಬಾಬರ್ ಅಜಮ್ ಭಾರತಕ್ಕೆ ಮೊದಲ ಬ್ಯಾಟಿಂಗ್ ಆಹ್ವಾನ ನೀಡಿದ್ದಾರೆ. ಭಾರತ ತಂಡದಲ್ಲಿ ಕೆಲ ಬದಲಾವಣೆಗಳನ್ನು ಮಾಡಿದ್ದು, ಶ್ರೇಯಸ್ ಅಯ್ಯರ್ ಬದಲು ಕೆಎಲ್ ರಾಹುಲ್ ಅವರನ್ನು ತಂದಿದೆ. ಹಾಗೇ ಶಮಿಯನ್ನು ಕೈಬಿಟ್ಟು ಬುಮ್ರಾ ತಂಡಕ್ಕೆ ಸೇರ್ಪಡೆ ಆಗಿದ್ದಾರೆ.
ಪಾಕಿಸ್ತಾನ ತಂಡ ಕಳೆದ ರಾತ್ರಿಯೇ ತನ್ನ ತಂಡವನ್ನು ಪ್ರಕಟಿಸಿತ್ತು. ಗುಂಪು ಹಂತದ ಭಾರತದ ವಿರುದ್ಧದ ಪಂದ್ಯಕ್ಕೆ ಫಹೀಮ್ ಅಶ್ರಫ್ ಇರಲಿಲ್ಲ. ಇಂದಿನ ಪಂದ್ಯಕ್ಕೆ ಅವರನ್ನು ಆಡಿಸಲಾಗುತ್ತಿದೆ. ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ 7 ಓವರ್ ಮಾಡಿ 27 ರನ್ ಕೊಟ್ಟು 3.90 ಎಕಾನಮಿಯಲ್ಲಿ 1 ವಿಕೆಟ್ ಪಡೆದು ಫಹೀಮ್ ಅಶ್ರಫ್ ಪ್ರಭಾವಿ ಬೌಲರ್ ಎನಿಸಿಕೊಂಡಿದ್ದರು. ಹೀಗಾಗಿ ಅಶ್ರಫ್ ಅವರನ್ನು ಇಂದಿನ ಪಂದ್ಯಕ್ಕೆ ಬಾಬರ್ ಉಳಿಸಿಕೊಂಡಿದ್ದಾರೆ.
ತಂಡಕ್ಕೆ ಮರಳಿದ ಕನ್ನಡಿಗ: ಕೆಎಲ್ ರಾಹುಲ್ ಏಷ್ಯಾಕಪ್ ಪ್ರಾರಂಭದ ವೇಳೆ ಸಂಪೂರ್ಣ ಫಿಟ್ ಆಗಿರದ ಕಾರಣ ಮೊದಲೆರಡು ಪಂದ್ಯಗಳಿಗೆ ಅಲಭ್ಯರಾಗಿದ್ದರು. ಸೆಪ್ಟೆಂಬರ್ 4 ರಂದು ನಡೆಸಿದ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸ್ ಆದ ರಾಹುಲ್ ತಂಡವನ್ನು ಸೇರಿಕೊಂಡಿದ್ದರು. ಇಂದಿನ ತಂಡದಲ್ಲಿ ಅಯ್ಯರ್ ಅವರನ್ನು ಕೈಬಿಟ್ಟು ರಾಹುಲ್ಗೆ ನಾಲ್ಕನೇ ಸ್ಥಾನದಲ್ಲಿ ಅವಕಾಶ ನೀಡಲಾಗಿದೆ. ಕಿಶನ್ ಕೂಡಾ ತಂಡದಲ್ಲಿರುವುದರಿಂದ ರಾಹುಲ್ಗೆ ಕೇವಲ ಬ್ಯಾಟಿಂಗ್ ಜವಾಬ್ದಾರಿ ಮಾತ್ರ ನೀಡುವ ಸಾಧ್ಯತೆ ಇದೆ.
ಶಮಿಗೆ ಕೊಕ್: ಮೊದಲ ಮಗು ಅಂಗದ್ನ ಜನನದ ಹಿನ್ನೆಲೆಯಲ್ಲಿ ನೇಪಾಳ ವಿರುದ್ಧ ಪಂದ್ಯದ ವೇಳೆ ಭಾರತಕ್ಕೆ ಮರಳಿದ್ದ ಜಸ್ಪ್ರೀತ್ ಬುಮ್ರಾ ಸಹ ಮರಳಿ ತಂಡವನ್ನು ಸೇರಿದ್ದಾರೆ. ಹೀಗಾಗಿ ನೇಪಾಳದ ವಿರುದ್ಧ ಆಡಿದ್ದ ಶಮಿಯನ್ನು ಈ ಪಂದ್ಯದಲ್ಲಿ ಹೊರಗಿಟ್ಟು ಬುಮ್ರಾ ಅವರನ್ನು ತಂಡದಲ್ಲಿ ಆಡಿಸಲಾಗುತ್ತಿದೆ.