ಕೊಲಂಬೊ (ಶ್ರೀಲಂಕಾ): ನೀಲಾಕಾಶದ ಅಡಿಯಲ್ಲಿ ಆರಂಭವಾದ ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೆ ಒಮ್ಮೆಗೆ ಮಳೆ ಕಾಡಿದೆ. 24.1ನೇ ಓವರ್ ವೇಳೆ ಜೋರಾಗಿ ಆರಂಭವಾದ ಮಳೆ ಸುಮಾರು ಎರಡು ಗಂಟೆಗಳ ಕಾಲ ಎಡೆಬಿಡದೇ ಸುರಿದಿದೆ. ಇದರಿಂದ ಮೈದಾನ ಇನ್ನೂ ತೇವಾಂಶದಿಂದ ಕೂಡಿದ್ದು, ಪಂದ್ಯವನ್ನು ನಾಳಿನ ಮೀಸಲು ದಿನಕ್ಕೆ ಮುಂದೂಡಲಾಗಿದೆ.
ಭಾರತ ಮಳೆ ಆರಂಭಕ್ಕೂ ಮುನ್ನ ರೋಹಿತ್ ಶರ್ಮಾ (56) ಮತ್ತು ಶುಭಮನ್ ಗಿಲ್ (58) ವಿಕೆಟ್ ಕಳೆದುಕೊಂಡು 147 ರನ್ ಕಲೆ ಹಾಕಿದೆ. ಕ್ರೀಸ್ನಲ್ಲಿ ವಿರಾಟ್ ಕೊಹ್ಲಿ(8) ಮತ್ತು ಕೆಎಲ್ ರಾಹುಲ್ (17) ಇದ್ದಾರೆ. ನಾಳೆ (ಸೋಮವಾರ) ಇದೇ ಹಂತದಿಂದ ಪಂದ್ಯ ಆರಂಭವಾಗಲಿದ್ದು, ಭಾರತ ಬಾಕಿ 25 ಓವರ್ ಬ್ಯಾಟಿಂಗ್ ಮಾಡಬೇಕಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ಗಿಳಿದ ಭಾರತ ಉತ್ತಮ ಆರಂಭವನ್ನು ಪಡೆದುಕೊಂಡಿತ್ತು. ಏಷ್ಯಾಕಪ್ನ ಲೀಗ್ ಹಂತದ ಪಂದ್ಯದಲ್ಲಿ ಪಾಕ್ ಬೌಲರ್ಗಳಿಗೆ ನಲುಗಿದ್ದ ಗಿಲ್ ಇಂದು ಹೆಚ್ಚು ಭರವಸೆಯಲ್ಲಿ ಕಂಡು ಬಂದರು. ಬೌಂಡರಿಗಳ ಸಹಾಯದಿಂದಲೇ ರನ್ ಕಲೆಹಾಕಿದರು. ರೋಹಿತ್ ಶರ್ಮಾ ಇಂದು ಮೊದಲ ಕೆಲ ಓವರ್ಗಳಲ್ಲಿ ಅಷ್ಟು ಉತ್ತಮ ಬ್ಯಾಟಿಂಗ್ ಮಾಡಲಿಲ್ಲ. ನಂತರ ಪಾಕ್ ವಿರುದ್ಧ ಲಯ ಕಂಡುಕೊಂಡರು.
ರೋಹಿತ್ ಶರ್ಮಾ ಅವರನ್ನು ಪಾಕ್ನ ಸ್ವಿಂಗ್ ಸ್ಪೆಶಾಲಿಷ್ಟ್ ನಸೀಮ್ ಕಾಡಿದರು. ಅವರ ಸ್ವಿಂಗ್ ಬಾಲ್ಗೆ ನಾಯಕ ರೋಹಿತ್ ವಿಕೆಟ್ ಕಾಯ್ದುಕೊಳ್ಳಲು ಪರದಾಡಿಸರು. ಇದರಿಂದ 20 ಬಾಲ್ ಅಡಿದ ರೋಹಿತ್ ಕೇವಲ 10 ರನ್ ಗಳಿಸಿದ್ದರು. ಆದರೆ ಪವರ್ ಪ್ಲೇ ನಂತರ ಸ್ಪಿನ್ನರ್ಗಳಿಗೆ ಚಳಿ ಬಿಡಿಸಿದರು. ಒಂದೇ ಓವರ್ನಲ್ಲಿ 15ಕ್ಕೂ ಹೆಚ್ಚು ರನ್ ಗಳಿಸಿ ಕಮ್ಬ್ಯಾಕ್ ಮಾಡಿದರು.