ಲಾಹೋರ್ (ಪಾಕಿಸ್ತಾನ): ಏಷ್ಯಾಕಪ್ 2023ರ ಸೂಪರ್-4 ಹಂತದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಇಲ್ಲಿನ ಗಡಾಫಿ ಮೈದಾನದಲ್ಲಿ ಮುಖಾಮುಖಿ ಆಗುತ್ತಿದೆ. ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಬಾಂಗ್ಲಾದೇಶ ಒಂದು ಬದಲಾವಣೆ ಮಾಡಿಕೊಂಡಿದ್ದು, ಶಾಂಟೊ ಬದಲಾಗಿ ಲಿಟ್ಟನ್ ದಾಸ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ನಿನ್ನೆ ನಡೆದ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ಶ್ರೀಲಂಕಾ ಮಣಿಸಿದ್ದರಿಂದ ಬಾಂಗ್ಲಾದೇಶ ಸೂಪರ್-4ನಲ್ಲಿ ಸ್ಥಾನ ಪಡೆದುಕೊಂಡಿತು. ಗುಂಪು ಹಂತದಲ್ಲಿ ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನವನ್ನು ಮಣಿಸಿದ ಶ್ರೀಲಂಕಾ ಬಲಿಷ್ಠ ತಂಡವಾಗಿ ಹೊರಹೊಮ್ಮಿದೆ.
ಪಾಕಿಸ್ತಾನ ತಂಡ ಐಸಿಸಿ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದೆ. ಬಲಿಷ್ಠ ಬೌಲಿಂಗ್ ಮತ್ತು ಬ್ಯಾಟಿಂಗ್ ಪಡೆಯನ್ನು ಪಾಕ್ ತಂಡ ಹೊಂದಿದೆ. ನೇಪಾಳ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ನಾಯಕ ಬಾಬರ್ ಅಜಮ್ ಶತಕ ಗಳಿಸಿ ತಮ್ಮ ಗೋಲ್ಡನ್ ಫಾರ್ಮ್ ಅನ್ನು ಏಷ್ಯಾಕಪ್ನಲ್ಲೂ ಮುಂದುವರೆಸಿದ್ದಾರೆ. ಅವರಲ್ಲದೇ ಇಫ್ತಿಕರ್ ಅಹ್ಮದ್ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ರನ್ ಕಲೆಹಾಕಿದ್ದಾರೆ. ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಬಾಬರ್ ಅಜಮ್ ನಂ.1 ಆದರೆ, ಇಮಾಮ್ ಉಲ್ಹಕ್ 4 ಮತ್ತು ಫಾಕರ್ ಜಾಮಾನ್ 7ನೇ ಸ್ಥಾನದಲ್ಲಿದ್ದಾರೆ