ಕೊಲಂಬೊ (ಶ್ರೀಲಂಕಾ): ಪಾಕಿಸ್ತಾನದ ವಿರುದ್ಧ ಲಂಕಾದ ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾರತ ನಿನ್ನೆ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ 356 ರನ್ ಕಲೆಹಾಕಿತ್ತು. ಆದರೆ, ಇಂದು ಅದೇ ಮೈದಾನದಲ್ಲಿ ಶ್ರೀಲಂಕಾದ ದುನಿತ್ ವೆಲ್ಲಲಾಗೆ ಮತ್ತು ಚರಿತ್ ಅಸಲಂಕಾ ಬೌಲಿಂಗ್ನಲ್ಲಿ ಭಾರತ ಬ್ಯಾಟಿಂಗ್ ವೈಫಲ್ಯ ಕಂಡಿತು. ನಾಯಕ ರೋಹಿತ್ ಶರ್ಮಾ ಅರ್ಧಶತಕ ಬಿಟ್ಟರೆ ಮತ್ಯಾವ ಬ್ಯಾಟರ್ ಹೇಳಿಕೊಳ್ಳುವಂತ ಸ್ಕೋರ್ ಕಲೆಹಾಕಲಿಲ್ಲ. ಇದರಿಂದ ಭಾರತ 49.1 ಓವರ್ಗೆ 213 ರನ್ಗಳಿಗೆ ಸರ್ವಪತನ ಕಂಡಿತು. ಶ್ರೀಲಂಕಾ ಗೆಲ್ಲಲು 214 ರನ್ಗಳನ್ನು ಬಾರಿಸಬೇಕಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಮೈದಾನಕ್ಕಿಳಿದ ಭಾರತ ತಂಡ ಮೊದಲ ಪವರ್ ಪ್ಲೇ ಅವಧಿಯಲ್ಲಿ ಉತ್ತಮ ಪ್ರದರ್ಶನವನ್ನು ನೀಡಿತು. ಆರಂಭಿಕ ಯುವ ಬ್ಯಾಟರ್ ಶುಭಮನ್ ಗಿಲ್ ರನ್ಗಳಿಸಲು ಪರದಾಡಿದರು. ಆದರೆ, ನಾಯಕ ರೋಹಿತ್ ಶರ್ಮಾ ತಮ್ಮ ಸಾಮಾನ್ಯ ಆಟ ವಾಡಿದರು. ಇದರಿಂದ ಭಾರತ 10 ಓವರ್ಗೆ ವಿಕೆಟ್ ನಷ್ಟವಿಲ್ಲದೇ 65 ರನ್ ಗಳಸಿ ದೊಡ್ಡ ಮೊತ್ತಗಳಿಸುವ ಸಂದೇಶ ನೀಡಿತ್ತು. ಆದರೆ, ಎಲ್ಲಾ ಲೆಕ್ಕಾಚಾರವನ್ನು ಲಂಕಾದ ಸ್ಪಿನ್ನರ್ಗಳು ಬುಡಮೇಲು ಮಾಡಿದರು ಎಂದರೆ ತಪ್ಪಾಗದು.
ಪವರ್ ಪ್ಲೇ ಮುಗಿಯುತ್ತಿದ್ದಂತೆ ದಾಳಿಗೆ ಇಳಿದ ಲಂಕಾ ಸ್ಪಿನ್ನರ್ ದುನಿತ್ ವೆಲ್ಲಲಾಗೆ ಅತ್ಯದ್ಬುತ ಸ್ಪಿನ್ ದಾಳಿ ನಡೆಸಿದರು. ವೆಲ್ಲಲಾಗೆಯ ಸ್ಪಿನ್ಗೆ ಭಾರತದ ಅಗ್ರ ಕ್ರಮಾಂಕ ಇದ್ದಕ್ಕಿದ್ದಂತೆ ಕುಸಿಯಿತು. 12,14, 16ನೇ ಓವರ್ನಲ್ಲಿ ವೆಲ್ಲಲಾಗೆಗೆ ಕ್ರಮವಾಗಿ ಗಿಲ್, ವಿರಾಟ್, ರೋಹಿತ್ ವಿಕೆಟ್ ಒಪ್ಪಿಸಿದರು. ಪಾಕ್ ವಿರುದ್ಧ ಅರ್ಧಶತಕ ಗಳಿಸಿದ್ದ ಗಿಲ್ ಇಂದು 25 ಬಾಲ್ನಲ್ಲಿ 19 ರನ್ ಗಳಿಸಿ ಪೆವಿಲಿಯನ್ಗೆ ತೆರಳಿದರು. ನಿನ್ನೆ ಶತಕ ಸಿಡಿಸಿದ್ದ ವಿರಾಟ್ ಇಂದು 12ಗೆ 3 ರನ್ ಗಳಿಸಿ ವಿಕೆಟ್ ಕೊಟ್ಟರು. ನಾಯಕ ರೋಹಿತ್ ಶರ್ಮಾ 48 ಬಾಲ್ನಲ್ಲಿ 7 ಬೌಂಡರಿ ಮತ್ತು 2 ಸಿಕ್ಸ್ನಿಂದ 53 ಗಳಸಿ ಔಟ್ ಆದರು.
ನಾಲ್ಕನೇ ಬ್ಯಾಟರ್ ಆಗಿ ರಾಹುಲ್ ಬದಲು ಇಶಾನ್ ಕಿಶನ್ ಬಡ್ತಿ ಪಡೆದು ಮೈದಾನಕ್ಕಿಳಿದರು, ಐದನೇ ಸ್ಥಾನದಲ್ಲಿ ರಾಹುಲ್ ಬಂದರು. ಈ ಜೋಡಿ 4ನೇ ವಿಕೆಟ್ಗೆ 50 ರನ್ನ ಜೊತೆಯಾಟ ಮಾಡಿ ಭರವಸೆ ಮೂಡಿಸಿತ್ತು. ನಿನ್ನೆ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಶತಕ ಗಳಿಸಿ ಟೀಮ್ ಇಂಡಿಯಾಗೆ ಗ್ರೇಟ್ ಕಮ್ಬ್ಯಾಕ್ ಮಾಡಿದ್ದ ಕೆಎಲ್ ರಾಹುಲ್ 44 ಬಾಲ್ನಲ್ಲಿ 4 ಬೌಂಡರಿಯ ಸಹಾಯದಿಂದ 39 ರನ್ ಗಳಿಸಿ ಆಡುತ್ತಿದ್ದ ವೇಳೆ ದುನಿತ್ ವೆಲ್ಲಲಾಗೆ ನಾಲ್ಕನೇ ವಿಕೆಟ್ ಆಗಿ ಬಲಿಯಾದರು. ಅವರ ಬೆನ್ನಲ್ಲೇ 33 ರನ್ ಗಳಿಸಿದ್ದ ಇಶಾನ್ ಕಿಶನ್ ಸಹ ವಿಕೆಟ್ ಒಪ್ಪಿಸಿದರು.