ಕೊಲಂಬೊ (ಶ್ರೀಲಂಕಾ):ಸ್ಪಿನ್ ಮೂಲಕ ಬಲಿಷ್ಠ ಭಾರತವನ್ನು ಕಟ್ಟಿ ಹಾಕಿದ್ದ ಶ್ರೀಲಂಕಾ ಟೀಂ ಇಂಡಿಯಾದ ಸಾಂಘಿಕ ದಾಳಿಗೆ ಸಿಲುಕಿ ಸೂಪರ್ಫೋರ್ ಪಂದ್ಯದಲ್ಲಿ 41 ರನ್ಗಳ ಅಂತರದಿಂದ ಸೋಲು ಕಂಡಿತು. ಪಾಕಿಸ್ತಾನದ ವಿರುದ್ಧ 5 ವಿಕೆಟ್ ಪಡೆದು ಮಿಂಚಿದ್ದ ಕುಲದೀಪ್ ಯಾದವ್ ಇಂದು ನಾಲ್ಕು ವಿಕೆಟ್ ಕಬಳಿಸಿ ತಂಡವನ್ನು ಫೈನಲ್ಗೆ ಏರಿಸಿದರು.
ಮೊದಲು ಬ್ಯಾಟ್ ಮಾಡಿ ಭಾರತ ನೀಡಿದ್ದ 214 ರನ್ಗಳ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಶ್ರೀಲಂಕಾ ತಂಡ ಆರಂಭದಲ್ಲೇ ಬ್ಯಾಟಿಂಗ್ ವೈಫಲ್ಯ ಎದುರಿಸಿತು. ಮೊದಲ 10 ಓವರ್ ಬೌಲ್ ಮಾಡಿದ ಭಾರತದ ಸ್ಟಾರ್ ವೇಗಿಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ರನ್ ಮೇಲೆ ಸಂಪೂರ್ಣ ಕಡಿವಾಣ ಹಾಕಿದರು. ಮೊದಲ ಪವರ್ ಪ್ಲೇಯಲ್ಲಿ ಭಾರತೀಯ ಬೌಲರ್ಗಳು ಲಂಕಾದ ಮೂವರು ಬ್ಯಾಟರ್ಗಳನ್ನು ಪೆವಿಲಿಯನ್ಗೆ ಕಳಿಸಿದರು. ಅಲ್ಲದೇ, ಮೂರು ಮೇಡಿನ್ ಓವರ್ ಮಾಡಿದರು. ಇದರಿಂದ 10 ಓವರ್ ಆಗುವಷ್ಟರಲ್ಲಿ ಲಂಕಾ 3 ವಿಕೆಟ್ ನಷ್ಟಕ್ಕೆ 39 ರನ್ ಗಳಿಸಿತು. ಪಾತುಮ್ ನಿಸ್ಸಾಂಕ 6 ಮತ್ತು ಕುಸಾಲ್ ಮೆಂಡಿಸ್ 15 ರನ್ಗೆ ಬುಮ್ರಾಗೆ ವಿಕೆಟ್ ಕೊಟ್ಟರೆ, 2 ರನ್ ಗಳಿಸಿದ್ದ ದಿಮುಕ ಕರುಣಾರತ್ನೆ ಅವರನ್ನು ಸಿರಾಜ್ ಔಟಾದರು.
ನಂತರ ಮಧ್ಯಮ ಕ್ರಮಾಂಕದ ಸಿಂಹಳೀಯ ಬ್ಯಾಟರ್ಗಳಾದ ಸದೀರ ಸಮರವಿಕ್ರಮ ಮತ್ತು ಚರಿತ್ ಅಸಲಂಕ ತಾಳ್ಮೆಯ ಆಟದ ಮೊರೆ ಹೋಗಿ ವಿಕೆಟ್ ಕಾಯ್ದುಕೊಂಡರು. ಒಂದೊಂದೆ ರನ್ ಕಲೆ ಹಾಕಿದರು. ಆದರೆ, ಪಾಕಿಸ್ತಾನದ ವಿರುದ್ಧ ಸ್ಪಿನ್ ಮೋಡಿ ಮಾಡಿ ಐದು ವಿಕೆಟ್ ಕಿತ್ತಿದ್ದ ಕುಲದೀಪ್ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದರು. 17 ರನ್ ಗಳಿಸಿ ಆಡುತ್ತಿದ್ದ ಸಮರವಿಕ್ರಮ ವಿಕೆಟ್ ಪಡೆದರು. ಇದರ ಬೆನ್ನಲ್ಲೇ ಚರಿತ್ (22) ವಿಕೆಟ್ ಅನ್ನೂ ಕುಲದೀಪ್ ಕಬಳಿಸಿದರು.