ಕೊಲಂಬೊ (ಶ್ರೀಲಂಕಾ): ಐಪಿಎಲ್ನಿಂದ ರಾಷ್ಟ್ರೀಯ ತಂಡಕ್ಕೆ ಪ್ರವೇಶ ಪಡೆದು ಮೂರು ಮಾದರಿಯ ಕ್ರಿಕೆಟ್ನಲ್ಲಿ ಮಿಂಚುತ್ತಿರುವ ಮೊಹಮ್ಮದ್ ಸಿರಾಜ್ ಏಷ್ಯಾಕಪ್ 2023ರ ಫೈನಲ್ ಪಂದ್ಯದಲ್ಲಿ ಜಾದುವನ್ನೇ ಮಾಡಿದರು. ಪಂದ್ಯದ ನಾಲ್ಕನೇ ಓವರ್ ಮಾಡಿದ ಅವರು, ಸಿಂಹಳೀಯರ ನಾಲ್ಕು ವಿಕೆಟ್ ಪಡೆದು ಜಂಘಾಬಲವನ್ನೇ ಕುಂದಿಸಿದರು. ಅಲ್ಲದೇ ಪಂದ್ಯದಲ್ಲಿ ಒಟ್ಟಾರೆಯಾಗಿ 7 ಓವರ್ ಮಾಡಿ 21 ರನ್ ಕೊಟ್ಟು 6 ವಿಕೆಟ್ ಪಡೆದರು. ಇದರಲ್ಲಿ ಒಂದು ಮೇಡನ್ ಓವರ್ ಸಹ ಇತ್ತು.
ಸಿರಾಜ್ಗೆ ಇಂದು ಹಾರ್ದಿಕ್ ಪಾಂಡ್ಯ ಮತ್ತು ಬುಮ್ರಾ ಸಾಥ್ ನೀಡಿದರು. ಮೊದಲ ಓವರ್ನಲ್ಲೇ ಬುಮ್ರಾ ವಿಕೆಟ್ ಪಡೆದರೆ, 13 ಮತ್ತು 16ನೇ ಓವರ್ನಲ್ಲಿ ಹಾರ್ದಿಕ್ ಮೂರು ವಿಕೆಟ್ ಪಡೆದರು. ಈ ಮೂಲಕ ಎಲ್ಲಾ 10ವಿಕೆಟ್ಗಳನ್ನು ಬೌಲರ್ಗಳೇ ಕಬಳಿಸಿದರು. ಇದರಿಂದ ಲಂಕಾ ಕೇವಲ 50 ರನ್ಗೆ ಸರ್ವಪತನ ಕಂಡಿತು. ಈ ಮೂಲಕ ಟೀಮ್ ಇಂಡಿಯಾ ತನ್ನ 23 ವರ್ಷದ ಹಿಂದಿನ ಸೋಲಿನ ಸೇಡನ್ನು ತೀರಿಸಿಕೊಂಡಿದೆ.
ಅದು 2000 ಇಸವಿಯಲ್ಲಿ ಜಿಂಬಾಬ್ವೆ, ಶ್ರೀಲಂಕಾ ಮತ್ತು ಭಾರತದ ನಡುವಣ ತ್ರಿಕೋನ ಸರಣಿಯನ್ನು ಯುಎಇಯಲ್ಲಿ ಆಯೋಜಿಸಲಾಗಿತ್ತು. ಇದರಲ್ಲಿ ಭಾರತ ಮತ್ತು ಲಂಕಾ ಫೈನಲ್ನಲ್ಲಿ ಮುಖಾಮುಖಿ ಆಗಿದ್ದವು. ಈ ಪಂದ್ಯದಲ್ಲಿ ಶ್ರೀಲಂಕಾ 50 ಓವರ್ಗೆ 299 ರನ್ ಗಳಿಸಿತ್ತು. ಇದನ್ನು ಬೆನ್ನತ್ತಿದ್ದ ಭಾರತ 54 ರನ್ಗೆ ಸರ್ವಪತನ ಕಂಡಿತ್ತು. ಈಗ ಈ 23 ವರ್ಷದ ಲಂಕಾ ಸೇಡನ್ನು ತೀರಿಸಿದಂತಾಗಿದೆ.
ಭಾರತದ ವಿರುದ್ಧ ಇದು ಮೊದಲ ಅತಿ ಅಲ್ಪ ಮೊತ್ತವಾಗಿದೆ. 2014ರಲ್ಲಿ ಬಾಂಗ್ಲಾದೇಶವನ್ನು ಟೀಮ್ ಇಂಡಿಯಾ 58 ರನ್ಗೆ ಆಲ್ಔಟ್ ಮಾಡಿತ್ತು, 2005 ರಲ್ಲಿ ಜಿಂಬಾಬ್ವೆ 65 ರನ್ಗೆ ಸರ್ವ ಪತನ ಕಂಡಿತ್ತು.
ಭಾರತದ ಪರ ಉತ್ತಮ ಬೌಲಿಂಗ್ ಪ್ರದರ್ಶನದಲ್ಲಿ ಸಿರಾಜ್ ಇಂದಿನ ಆಟ 4ನೇ ಬೆಸ್ಟ್ ಎಸೆತ ಎನಿಸಿಕೊಂಡಿದೆ. 2014 ರಲ್ಲಿ ಬಾಂಗ್ಲಾ ವಿರುದ್ಧ ಸ್ಟುವರ್ಟ್ ಬಿನ್ನಿ ಕೇವಲ 6 ರನ್ ಕೊಟ್ಟು 4 ವಿಕೆಟ್ ಪಡೆದಿದ್ದರು. 1993 ರಲ್ಲಿ ಅನಿಲ್ ಕುಂಬ್ಳೆ 12ಕ್ಕೆ 6 ವಿಕೆಟ್, 2022 ರಲ್ಲಿ ಜಸ್ಪ್ರೀತ್ ಬುಮ್ರಾ 19ಕ್ಕೆ 6 ವಿಕೆಟ್ ಮತ್ತು ಇಂದು ಸಿರಾಜ್ 19ಕ್ಕೆ 6 ವಿಕೆಟ್ ಪಡೆದು ದಾಖಲೆ ಮಾಡಿದ್ದಾರೆ.