ಕೊಲಂಬೊ (ಶ್ರೀಲಂಕಾ): ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಭಾನುವಾರ ಇಲ್ಲಿ ನಡೆಯಲಿರುವ ಏಷ್ಯಾಕಪ್‌ನ ಫೈನಲ್‌ನಲ್ಲಿ ಶ್ರೀಲಂಕಾದೊಂದಿಗೆ ಕಣಕ್ಕಿಳಿಯಲಿದೆ. 8ನೇ ಬಾರಿಗೆ ಟೀಮ್ ಭಾರತ ಏಷ್ಯಾಕಪ್ ಟ್ರೋಫಿಯನ್ನು ಗೆಲ್ಲುವ ನೆಚ್ಚಿನ ತಂಡವಾಗಿದೆ. ಆದರೆ ಫೈನಲ್ ಪಂದ್ಯಕ್ಕೂ ಮುನ್ನ ಭಾರತಕ್ಕೆ ಅಕ್ಷರ್ ಪಟೇಲ್ ಗಾಯಗೊಂಡಿರುವುದು ಬೇಸರದ ಸಂಗತಿಯಾಗಿದೆ. ಅಲ್ಲದೇ ಪ್ರಮುಖ ಸ್ಪಿನ್ನರ್ ಮಹೇಶ್ ತೀಕ್ಷ್ಣಣ ಸಹ ನಾಳಿನ ಪಂದ್ಯವನ್ನು ಆಡುತ್ತಿಲ್ಲ.
ಕಳೆದ ಐದು ವರ್ಷದಲ್ಲಿ ಭಾರತ ಯಾವುದೇ ಟ್ರೋಫಿಯನ್ನು ಗೆದ್ದಿಲ್ಲ ಎನ್ನುವುದು ಈ ಹಂತದಲ್ಲಿ ಗಮನಾರ್ಹ ವಿಷಯವಾಗಿದೆ. ಹೀಗಾಗಿ ಭಾರತಕ್ಕೆ ವಿಶ್ವಕಪ್ಗೂ ಮುನ್ನ ಪ್ರಮುಖ ಈವೆಂಟ್ನಲ್ಲಿ ಪ್ರಶಸ್ತಿ ಗೆಲ್ಲುವ ಭಾರವೂ ಇದೆ. ಅಲ್ಲದೇ ಏಷ್ಯಾಕಪ್ ಗೆದ್ದಲ್ಲಿ ಭಾರತದಲ್ಲಿ ನಡೆಯಲಿರುವ ವಿಶ್ವಕಪ್ಗೆ ಮುನ್ನ ವಿಶ್ವಾಸ ಹೆಚ್ಚಾಗಲಿದೆ. ಈಗಾಗಲೇ ಸೂಪರ್ ಫೋರ್ ಹಂತದಲ್ಲಿ ಲಂಕಾವನ್ನು ಮಣಿಸಿರುವ ಭಾರತ ಅದೇ ಫಾರ್ಮ್ನ್ನು ಮುಂದುವರೆಸಬೇಕಿದೆ. 2018ರಲ್ಲಿ ದುಬೈನಲ್ಲಿ ನಡೆದ ಏಷ್ಯಾಕಪ್ನಲ್ಲಿ ಭಾರತ ಗೆಲುವು ದಾಖಲಿಸಿತ್ತು. ನಂತರ ನಡೆದ 2019ರ ವಿಶ್ವಕಪ್, 2022ರ ಟಿ20 ವಿಶ್ವಕಪ್ ಹಾಗೂ 2019 ಮತ್ತು 2023ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಪ್ರಮುಖ ಹಂತದ ವರೆಗೆ ಹೋಗಿ ಸೋಲುಕಂಡಿತ್ತು.
ಫಾರ್ಮ್ನಲ್ಲಿದೆ ಭಾರತ: ಟೀಮ್ ಇಂಡಿಯಾದ ಆಟಗಾರರು ಫಾರ್ಮ್ನಲ್ಲಿದ್ದಾರೆ. ಆರಂಭಿಕ ಶುಭಮನ್ ಗಿಲ್, ರೋಹಿತ್ ಶರ್ಮಾ ಲಯವನ್ನು ತೋರಿಸಿದ್ದಾರೆ. ಅಲ್ಲದೇ ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಮತ್ತು ಕೆ ಎಲ್ ರಾಹುಲ್ ಶತಕ ಗಳಿಸಿದ್ದಾರೆ. ಕಿಶನ್ ಮತ್ತು ಹಾರ್ದಿಕ್ ಸಹ ಏಷ್ಯಾಕಪ್ನಲ್ಲಿ ಮಿಂಚಿದ್ದಾರೆ. ಬೌಲಿಂಗ್ನಲ್ಲೂ ಬುಮ್ರಾ ಬೆಸ್ಟ್ ಕಮ್ಬ್ಯಾಕ್ ಮಾಡಿದ್ದಾರೆ. ಸ್ಪಿನ್ ವಿಭಾಗದಲ್ಲಿ ಕುಲ್ದೀಪ್ ಯಾದವ್ 9 ವಿಕೆಟ್ ಪಡೆದಿದ್ದು ನಾಳೀನ ಪಂದ್ಯದಲ್ಲಿ ಅವರೇ ಮುಖ್ಯ ಬೌಲರ್ ಆಗಿರಲಿದ್ದಾರೆ. ಏಕೆಂದರೆ ಪ್ರೇಮದಾಸ ಕ್ರೀಡಾಂಗಣ ಸ್ಪಿನ್ ಬೌಲರ್ಗೆ ಹೇಳಿಮಾಡಿಸಿದಂತಿದೆ.
ಸ್ಪಿನ್ನಲ್ಲಿ ಲಂಕಾ ಸ್ಟ್ರಾಂಗ್:ಸೂಪರ್ 4 ಹಂತದ ಹಣಾಹಣಿಯಲ್ಲಿ ಲಂಕಾ ಭಾರತವನ್ನು ತನ್ನ ಸ್ಪಿನ್ ದಾಳಿಯಿಂದ ಕಟ್ಟಿಹಾಕಿತ್ತು. ಸಿಂಹಳೀಯರ ಸ್ಪಿನ್ನರ್ಗಳೇ 10 ವಿಕೆಟ್ ಪಡೆದಿದ್ದರು. ದುನಿತ್ ವೆಲ್ಲಲಗೆ ಹೆಚ್ಚು ವಿಕೆಟ್ ಪಡೆದು ಮಿಂಚಿದ್ದರು. ಹೀಗಾಗಿ ನಾಳೆ ದುನಿತ್ ವೆಲ್ಲಲಗೆ,ಚರಿತ್ ಅಸಲಂಕ ಭಾರತಕ್ಕೆ ಪ್ರಥಮ ಭಯವಾಗಿದ್ದಾರೆ.