ಪಲ್ಲೆಕೆಲೆ (ಶ್ರೀಲಂಕಾ): ಭಾರತ ಏಷ್ಯಾ ಕಪ್ ಅನ್ನು ಪ್ರಾರಂಭಿಸಿದೆ. ಆದ್ರೆ ಅಭಿಮಾನಿಗಳು ತುಂಬಾ ಅಸಮಾಧಾನಗೊಂಡಿದ್ದಾರೆ. ಪಾಕಿಸ್ತಾನದೊಂದಿಗಿನ ಕದನ ಮಳೆಯಿಂದಾಗಿ ರದ್ದಾಯ್ತಾಲ್ಲ ಎಂಬ ನಿರಾಸೆ. ಈಗ ರೋಹಿತ್ ಪಡೆ ಮತ್ತೊಂದು ಹೋರಾಟಕ್ಕೆ ಸಜ್ಜಾಗಿದೆ. ಈ ಬಾರಿ ಅದು ಕ್ರಿಕೆಟ್ ಶಿಶು ನೇಪಾಳ. ಪಾಕಿಸ್ತಾನದ ಜತೆಗಿನ ಪಂದ್ಯದಲ್ಲಿ ಅಂಕ ಹಂಚಿಕೊಂಡಿರುವ ಟೀಂ ಇಂಡಿಯಾ ನೇಪಾಳ ವಿರುದ್ಧ ಭರ್ಜರಿ ಜಯ ಸಾಧಿಸಿ ಸೂಪರ್-4 ಸ್ಥಾನಕ್ಕೆ ಲಗ್ಗೆಯಿಡುವ ನಿರೀಕ್ಷೆಯಲ್ಲಿದೆ. ಆದರೆ, ಈ ಪಂದ್ಯಕ್ಕೂ ವರುಣನ ಭೀತಿ ಎದುರಾಗಿದೆ.
ಟೀಂ ಇಂಡಿಯಾ ಬೃಹತ್ ಗೆಲುವಿನೊಂದಿಗೆ ಟೂರ್ನಿಯನ್ನು ಉತ್ತಮವಾಗಿ ಆರಂಭಿಸಿದ್ದಲ್ಲದೆ ಗ್ರೂಪ್-ಎಯಲ್ಲಿ ಸೂಪರ್-4 ಸ್ಥಾನ ಭದ್ರಪಡಿಸಿಕೊಳ್ಳುವ ಸಂಕಲ್ಪ ತೊಟ್ಟಿದ್ದಾರೆ. ಈ ಪಂದ್ಯ ಮಳೆಯಿಂದ ರದ್ದಾದ್ರೂ ಭಾರತ 2 ಅಂಕಗಳಿಂದ ಮುನ್ನಡೆ ಸಾಧಿಸಲಿದೆ. ಹೀಗಾಗಿ ಭಾರತಕ್ಕೆ ಮಳೆಯಿಂದ ಪಂದ್ಯ ರದ್ದಾದ್ರೆ ಚಿಂತಿಲ್ಲ. ಆದ್ರೆ ನೇಪಾಳ ವಿರುದ್ಧ ಪಂದ್ಯ ಸೋಲನ್ನಪ್ಪಿದ್ರೆ ಸೂಪರ್ 4ಗೆ ಲಗ್ಗೆಯಿಡದೇ ಮನೆಗೆ ವಾಪಸ್ ಆಗಲಿದ್ದಾರೆ ರೋಹಿತ್ ಬಳಗ. ಏಕೆಂದರೆ ನೇಪಾಳ ಈಗಾಗಲೇ ಪಾಕಿಸ್ತಾನದಿಂದ ಸೋತಿದೆ. ಈ ಪಂದ್ಯ ಗೆದ್ರೆ ಎರಡು ಅಂಕ ಪಡೆಯುವ ಮೂಲಕ ಮುನ್ನಡೆ ಸಾಧಿಸಲಿದೆ.
ಟಾಪ್ ಆರ್ಡರ್ ಮೇಲೆ ಕಣ್ಣು:ಪಾಕಿಸ್ತಾನದ ವೇಗಿಗಳ ವಿರುದ್ಧ ಸೆಣಸಿರುವ ಭಾರತದ ಅಗ್ರ ಕ್ರಮಾಂಕ ನೇಪಾಳ ಎದುರು ಮಿಂಚಬೇಕಿದೆ. ಪಾಕಿಸ್ತಾನದ ವಿರುದ್ಧ ವಿಫಲವಾಗಿರುವ ನಾಯಕ ರೋಹಿತ್ ಶರ್ಮಾ ಹಾಗೂ ಸ್ಟಾರ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಭರ್ಜರಿ ಇನ್ನಿಂಗ್ಸ್ ಆಡುತ್ತಾರೆ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಆಗಾಗ್ಗೆ ವೈಫಲ್ಯ ಅನುಭವಿಸುತ್ತಿರುವ ಶುಭಮನ್ ಗಿಲ್ ಕೂಡ ತಮ್ಮ ಫಾರ್ಮ್ ಕಂಡುಕೊಳ್ಳಲು ಇದು ಒಳ್ಳೆಯ ಅವಕಾಶ. ಗಾಯದಿಂದ ಚೇತರಿಸಿಕೊಂಡ ನಂತರ ಪುನರಾಗಮನ ಮಾಡಲು ವಿಫಲರಾದ ಶ್ರೇಯಸ್ ಅಯ್ಯರ್ಗೂ ಇದು ಮತ್ತೊಂದು ಅವಕಾಶ. ಪಾಕಿಸ್ತಾನದ ವಿರುದ್ಧ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಇಶಾನ್ ಕಿಶನ್ ಮತ್ತು ಹಾರ್ದಿಕ್ ಪಾಂಡ್ಯ ಈ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕರೆ ಹೇಗೆ ಆಡುತ್ತಾರೆ ಎಂಬುದನ್ನು ನೋಡಬೇಕು. ವಿಶ್ವಕಪ್ ತಂಡದ ಆಯ್ಕೆಗೂ ಮುನ್ನ ತಪ್ಪುಗಳನ್ನು ತಿದ್ದಿಕೊಳ್ಳುವುದಲ್ಲದೆ, ತಂಡ ರಚನೆ ಬಗ್ಗೆ ಟೀಂ ಇಂಡಿಯಾ ಒಂದು ಅಂದಾಜಿಗೆ ಬರಬೇಕಿದೆ.