ಪಲ್ಲೆಕೆಲೆ (ಶ್ರೀಲಂಕಾ): ವಿಶ್ವಕಪ್ನ ಸಿದ್ಧತೆಯ ಹಿನ್ನೆಲೆಯಲ್ಲಿ ನಡೆಯುತ್ತಿರುವ ಏಕದಿನ ಮಾದರಿಯ ಏಷ್ಯಾಕಪ್ನಲ್ಲಿ ಭಾರತ ಮೊದಲ ಪಂದ್ಯದಲ್ಲಿ ಕೇವಲ ಒಂದು ಇನ್ನಿಂಗ್ಸ್ ಮಾತ್ರ ಆಡಿತು. ಭಾರತದ ಬೌಲಿಂಗ್ ಸಾಮರ್ಥ್ಯದ ಪರೀಕ್ಷೆ ಆಗಲೇ ಇಲ್ಲ. ಸೋಮವಾರ ನೇಪಾಳದ ವಿರುದ್ಧ ಭಾರತ ಸೆಣಸುತ್ತಿದೆ. ಅದು ಶನಿವಾರ ನಡೆದ ಮೈದಾನದಲ್ಲೇ ಪಂದ್ಯ ಆಯೋಜನೆಗೊಂಡಿದೆ. ಕ್ರಿಕೆಟ್ ಶಿಶು ಎಂದೇ ಕರೆಸಿಕೊಳ್ಳುತ್ತಿರುವ ನೇಪಾಳಕ್ಕೆ ಭಾರತ ಬಲಿಷ್ಠ ಎದುರಾಳಿ.
ಮೊದಲ ಬಾರಿಗೆ ಏಷ್ಯಾಕಪ್ನಲ್ಲಿ ನೇಪಾಳ ಸ್ಪರ್ಧಿಸುತ್ತಿದೆ. ಈ ಬಾರಿಯ ಏಷ್ಯಾಕಪ್ನ ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ತಮ್ಮ ಹೋರಾಟವನ್ನು ತೋರಿಸಿದರು. ಬೌಲಿಂಗ್ನಲ್ಲಿ ಆರಂಭಿಕರ ವಿಕೆಟ್ ಪಡೆಯುವಲ್ಲಿ ನೇಪಾಳಿ ಬೌಲರ್ಗಳು ಯಶಸ್ವಿ ಆದರು. ಆದರೆ ನಾಯಕ ಬಾಬರ್ ಮತ್ತು ಇಫ್ತಕರ್ನ್ನು ನಿಯಂತ್ರಿಸುವಲ್ಲಿ ಎಡವಿದ್ದರಿಂದ ಬೃಹತ್ ಮೊತ್ತವನ್ನು ಗುರಿಯಾಗಿ ಪಡೆದುಕೊಂಡಿತು. ಇದನ್ನು ಬೆನ್ನತ್ತಿದ ನೇಪಾಳ 104ಕ್ಕೆ ಆಲ್ಔಟ್ ಆಗಿತ್ತು.
ಪಾಕಿಸ್ತಾನದ ವಿರುದ್ಧ ಭಾರತದ ಟಾಪ್ ಆರ್ಡರ್ ಬ್ಯಾಟರ್ಗಳು ವೈಫಲ್ಯತೆ ಕಂಡಿದ್ದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಇಶಾನ್ ಕಿಶನ್ ಮತ್ತು ಹಾರ್ದಿಕ್ ಪಾಂಡ್ಯ ಚೇತರಿಕೆಯ ಆಟ ಆಡಿದರು. ಇದರಿಂದ ಭಾರತ ಪಾಕಿಸ್ತಾನಕ್ಕೆ ಸ್ಪರ್ಧಾತ್ಮಕ ಗುರಿಯನ್ನು ನೀಡಿತ್ತು. ಆದರೆ ಮಳೆ ಎರಡನೇ ಇನ್ನಿಂಗ್ಸ್ಗೆ ಅವಕಾಶ ಕೊಡದ ಹಿನ್ನೆಲೆಯಲ್ಲಿ ಪಂದ್ಯವನ್ನು ರದ್ದು ಮಾಡಲಾಯಿತು.
ಕ್ರಿಕೆಟ್ ಶಿಶುಗಳ ವಿರುದ್ಧವಾದರೂ ಆರಂಭಿಕ ಶುಭಮನ್ ಗಿಲ್ ದೈರ್ಯದಿಂದ ಬ್ಯಾಟಿಂಗ್ ಮಾಡಬೇಕಿದೆ. ಪಾಕಿಸ್ತಾನದ ಬೌಲರ್ಗಳಿಗೆ ಅಂಜಿಕೆಯಿಂದಲೇ ಗಿಲ್ ಬ್ಯಾಟ್ ಬೀಸುತ್ತಿದ್ದರು. ಅವರ ಜೊತೆ ನಾಯಕ ರೋಹಿತ್ ಶರ್ಮಾ ಸಹ ತಮ್ಮ ಅನುಭವವನ್ನು ರನ್ ಗಳಿಸುವ ಮೂಲಕ ತೋರಬೇಕಿದೆ. ದಾಖಲೆಗಳ ವೀರ ವಿರಾಟ್ ಪಾಕಿಸ್ತಾನದ ವಿರುದ್ಧ ಫ್ಲಾಫ್ ಆಗಿದ್ದು, ನೇಪಾಳ ಬೌಲರ್ಗಳನ್ನಾದರೂ ಯಶಸ್ವಿಯಾಗಿ ಎದುರಿಸುತ್ತಾರಾ ಎಂಬುದನ್ನು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.
ಬುಮ್ರಾ ಅಲಭ್ಯ:ವೈಯುಕ್ತಿಕ ಕಾರಣದ ಹಿನ್ನೆಲೆಯಲ್ಲಿ ಜಸ್ಪ್ರೀತ್ ಬುಮ್ರಾ ತವರಿಗೆ ಮರಳಿದ್ದಾರೆ ಎಂದು ಬಿಸಿಸಿಐನ ಮೂಲಗಳು ಸುದ್ದಿ ಮಾಧ್ಯಮಕ್ಕೆ ಮಾಹಿತಿ ನೀಡಿದೆ. ಈ ಪ್ರಕಾರ ಭಾರತದ ಸ್ಟಾರ್ ವೇಗಿ ಬುಮ್ರಾ ಈ ಪಂದ್ಯಕ್ಕೆ ಅಲಭ್ಯರಾಗಿರಲಿದ್ದಾರೆ. ಅವರ ಬದಲಿಯಾಗಿ ಅನುಭವಿ ಮೊಹಮ್ಮದ್ ಶಮಿ ಅಥವಾ ಗಾಯದಿಂದ ಚೇತರಿಸಿಕೊಂಡು ಪುನರಾಗಮನ ಮಾಡಿರುವ ಪ್ರಸಿದ್ಧ್ ಕೃಷ್ಣಾ ಅವಕಾಶ ಪಡೆಯಲಿದ್ದಾರೆ.