ಕೊಲಂಬೊ (ಶ್ರೀಲಂಕಾ): ಸತತ ಎರಡು ಪಂದ್ಯಗಳನ್ನು ಗೆದ್ದ ಭಾರತ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪ್ರವೇಶಿಸಿದೆ. ಬಾಂಗ್ಲಾದೇಶ ತಂಡವು ಪಾಕಿಸ್ತಾನ ಹಾಗು ಶ್ರೀಲಂಕಾ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿದೆ. ಹೀಗಾಗಿ ಇಂದಿನ ಭಾರತ-ಬಾಂಗ್ಲಾ ನಡುವಣ ಪಂದ್ಯ ಔಪಚಾರಿಕವಾಗಿದೆ. ಟಾಸ್ ಗೆದ್ದ ಕ್ಯಾಪ್ಟನ್ ರೋಹಿತ್ ಶರ್ಮಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ತಿಲಕ್ ವರ್ಮಾ ಈ ಪಂದ್ಯದಲ್ಲಿ ಪಾದಾರ್ಪಣೆ ಮಾಡುತ್ತಿದ್ದಾರೆ. ಭಾರತ ತಂಡದಲ್ಲಿ ಐದು ಬದಲಾವಣೆ ಮಾಡಿದೆ.
ಶ್ರೀಲಂಕಾ ವಿರುದ್ಧದ ಫೈನಲ್ ಪಂದ್ಯಕ್ಕೆ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ಮಹಮ್ಮದ್ ಸಿರಾಜ್ ಮತ್ತು ಹಾರ್ದಿಕ್ ಪಾಂಡ್ಯ ತಂಡದಲ್ಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಸೂರ್ಯ ಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಅವರನ್ನು ಆಡಿಸಲಾಗುತ್ತಿದೆ. ಹಾರ್ದಿಕ್ ಬದಲು ಶಾರ್ದೂಲ್ ತಂಡ ಸೇರಿದ್ದಾರೆ. ವೇಗದ ಬೌಲಿಂಗ್ ವಿಭಾಗವನ್ನು ಪ್ರಸಿದ್ಧ್ ಕೃಷ್ಣ ಮತ್ತು ಶಮಿ ನಿರ್ವಹಿಸುತ್ತಿದ್ದಾರೆ.
ಭಾರತ ತಂಡಕ್ಕೆ ಈ ಪಂದ್ಯದ ಸೋಲು-ಗೆಲುವಿನಿಂದ ಯಾವುದೇ ವ್ಯತ್ಯಾಸ ಆಗದಿರುವ ಕಾರಣ ಏಷ್ಯಾಕಪ್ಗೆ ಆಯ್ಕೆಯಾಗಿ ಬೆಂಚ್ ಕಾಯುತ್ತಿದ್ದ ಎಲ್ಲರಿಗೂ ಅವಕಾಶ ನೀಡುವ ನಿಟ್ಟಿನಲ್ಲಿ ತಂಡ ಸಂಪೂರ್ಣ ಬದಲಾಗಿದೆ. ಗಾಯದಿಂದ ಚೇತರಿಸಿಕೊಂಡು ಫಿಟ್ ಆಗಿ ತಂಡಕ್ಕೆ ಮರಳಿದ್ದ ಅಯ್ಯರ್ ಮತ್ತೆ ಬೆನ್ನು ನೋವಿನ ಸಮಸ್ಯೆ ಎದುರಿಸುತ್ತಿದ್ದಾರೆ. ಕಳೆದೆರಡು ಪಂದ್ಯದಿಂದ ಅವರು ಹೊರಗುಳಿದಿದ್ದರು. ಇದೇ ಕಾರಣಕ್ಕೆ ನಾಯಕ ರೋಹಿತ್ ಶರ್ಮಾ, ಅಯ್ಯರ್ ಆರೋಗ್ಯದ ಬಗ್ಗೆ ಟಾಸ್ ವೇಳೆ ಯಾವುದೇ ಮಾಹಿತಿ ನೀಡಲಿಲ್ಲ. ವಿಶ್ವಕಪ್ ವೇಳೆ ಮಧ್ಯಮ ಕ್ರಮಾಂಕಕ್ಕೆ ಅಯ್ಯರ್ ಬದಲಾಗಿ ಬೇರೆ ಆಟಗಾರರ ಆಯ್ಕೆ ಮಾಡುವ ಸಾಧ್ಯತೆ ಇದೆ.