ಕೊಲಂಬೊ (ಶ್ರೀಲಂಕಾ):ನಾಯಕ ಶಕೀಬ್ ಅಲ್ ಹಸನ್ ಮತ್ತು ತೌಹೀದ್ ಹೃದಯೋಯ್ ಅವರ ಅರ್ಧಶತಕದ ನೆರವಿನಿಂದ ಭಾರತದ ವಿರುದ್ಧ ಬಾಂಗ್ಲಾದೇಶ ನಿಗದಿತ 50 ಓವರ್‌ಗಳ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 265 ರನ್ ಕಲೆಹಾಕಿತು. 3 ಮತ್ತು 4ನೇ ಸ್ಥಾನದಲ್ಲಿ ಪ್ರಮುಖ ಬದಲಾವಣೆ ಮಾಡಿಕೊಂಡಿರುವ ಭಾರತ ತಂಡ 266 ರನ್ ಗುರಿ ಬೆನ್ನತ್ತಬೇಕಿದೆ.
ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಭಾರತ ಈಗಾಗಲೇ ಫೈನಲ್‌ಗೇರಿದ್ದು, ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿ ಐದು ಬದಲಾವಣೆಯೊಂದಿಗೆ ಮೈದಾನಕ್ಕಿಳಿದಿದೆ. ಬೌಲಿಂಗ್ನಲ್ಲಿಂದು ತಂಡ ಸಾಧಾರಣ ಪ್ರದರ್ಶನ ನೀಡಿತು. ಬಾಂಗ್ಲಾ ಮೇಲೆ ಆರಂಭಿಕ ಓವರ್ಗಳಲ್ಲಿ ಯಶ ಕಂಡ ಬೌಲರ್ಗಳು ನಂತರ ಕೊಂಚ ಮಂಕಾದರು. ಮಧ್ಯಮ ಕ್ರಮಾಂಕದಲ್ಲಿ ಬಾಂಗ್ಲಾ ನಾಯಕ ಶಕೀಬ್ ಮತ್ತು ಹೃದಯೋಯ್ ಉತ್ತಮ ಜೊತೆಯಾಟ ನೀಡಿದರು.
ಲಿಟ್ಟನ್ ದಾಸ್ ತಾವು ಎದುರಿಸಿದ ಶಮಿ ಅವರ ಎರಡನೇ ಎಸೆತದಲ್ಲಿ ಶೂನ್ಯಕ್ಕೆ ಕ್ಲೀನ್ ಬೌಲ್ಡ್ ಆದರು. ಈ ಬೆನ್ನಲ್ಲೇ ಏಕದಿನ ತಂಡಕ್ಕೆ ಪಾದಾರ್ಪಣೆ ಮಾಡಿರುವ ತಂಝಿದ್ ಹಸನ್ ಸಹ ವಿಕೆಟ್ ಕೊಟ್ಟರು. ಮೂರನೇ ಬ್ಯಾಟರ್ ಅನಾಮುಲ್ ಹಕ್ 6ನೇ ಓವರ್ನಲ್ಲಿ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಬಾಂಗ್ಲಾ 6ನೇ ಓವರ್ ವೇಳೆಗೆ 28 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ನಾಯಕ ಶಕೀಬ್ ಮತ್ತು ಮೆಹಿದಿ ಹಸನ್ ಮಿರಾಜ್ ತಂಡಕ್ಕೆ ಕೊಂಚ ಜೊತೆಯಾಟ ಮಾಡಿದರು. ಆದರೆ ಮಿರಾಜ್ ಹೋರಾಟ ಅಕ್ಷರ್ ಪಟೇಲ್ ಬೌಲಿಂಗ್ ಮುಂದೆ ಹೆಚ್ಚು ಹೊತ್ತು ನಡೆಯಲಿಲ್ಲ.