ಕೋಲ್ಕತ್ತಾ:ವಿವಿಧ ಕಾರಣಗಳಿಂದಾಗಿ ಪಾಕಿಸ್ತಾನ ಪ್ರವಾಸ ಕೈಗೊಳ್ಳದಿರಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರ್ಧಾರ ಮಾಡಿದೆ. ಅದು ವಿಶ್ವಕಪ್ ಆಗಿರಲಿ ಅಥವಾ ಏಷ್ಯಾ ಕಪ್ ಆಗಿರಲಿ, ಯಾವುದೇ ಮಹತ್ವದ ಪಂದ್ಯಕ್ಕೂ ಪಾಕಿಸ್ತಾನ ತೆರಳುವುದಿಲ್ಲ ಎಂದು ಹೇಳಿದೆ. ಇದರಿಂದ ಸೆಪ್ಟೆಂಬರ್‌ನಲ್ಲಿ ಪಾಕಿಸ್ತಾನದಲ್ಲಿ ನಡೆಯಲಿರುವ ಏಷ್ಯಾಕಪ್ ಇನ್ನೂ ಅನಿಶ್ಚಿತತೆಯಲ್ಲಿದೆ.
ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿರುವುದರಿಂದ, ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್ 2023 ರಿಂದ ಹಿಂದೆ ಸರಿಯುವುದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈಗಾಗಲೇ ಹೇಳಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಿಸಿಸಿಐ ಯಾವುದೇ ಸಂದರ್ಭದಲ್ಲೂ ತಂಡ ಪಾಕಿಸ್ತಾನಕ್ಕೆ ಹೋಗುವುದಿಲ್ಲ ಸ್ಪಷ್ಟಪಡಿಸಿದೆ.
2009 ರಲ್ಲಿ ಶ್ರೀಲಂಕಾ ತಂಡದ ಮೇಲೆ ಪಾಕಿಸ್ತಾನದಲ್ಲಿ ಭಯೋತ್ಪಾದಕ ದಾಳಿ ನಡೆಯಿತು. ಇದರ ನಂತರ ಪಾಕಿಸ್ತಾನಕ್ಕೆ ಯಾವುದೇ ತಂಡಗಳು ದ್ವಿಪಕ್ಷೀಯ ಸರಣಿಗೆ ಪ್ರವಾಸ ಮಾಡಿರಲಿಲ್ಲಿ. ಕಳೆದ ವರ್ಷ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ಪಾಕಿಸ್ಥಾನಕ್ಕೆ ಹೋಗಿ ಆಡಿದ್ದವು ಇದರಿಂದ 13 ವರ್ಷಗಳ ನಂತರ ಪಾಕಿಸ್ತಾನದಲ್ಲಿ ಅಂತರಾಷ್ಟ್ರೀಯ ಪಂದ್ಯಾವಳಿಗಳು ನಡೆದವು. 1999 ರಲ್ಲಿನ ಕಾರ್ಗಿಲ್ ಯುದ್ಧದ ನಂತರ ಭಾರತ ತಂಡ ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಸರಣಿಯನ್ನು ಆಡುತ್ತಿಲ್ಲ. ಕೇವಲ ಐಸಿಸಿ ಮತ್ತು ಎಸಿಸಿ ನಡೆಸುವ ಮಹತ್ವದ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತವೆ.
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ನೇತೃತ್ವದ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ), ವಾಣಿಜ್ಯ ಅಂಶಗಳ ಮೇಲಿನ ಪರಿಣಾಮಗಳ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಬಿಸಿಸಿಐ ಈ ವಿಚಾರದಲ್ಲಿ ತಲೆ ಕೆಡಿಸಿಕೊಂಡಿಲ್ಲ. ಏಷ್ಯಾ ಕಪ್ ಬಗ್ಗೆ ಇನ್ನೂ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.