ಹೈದರಾಬಾದ್:2022ರ ಏಷ್ಯಾಕಪ್ ಶ್ರೀಲಂಕಾದಲ್ಲಿ ನಡೆಯಲಿದ್ದು, ಅದಕ್ಕಾಗಿ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ಆಗಸ್ಟ್ 27ರಿಂದ ಈ ಟೂರ್ನಿ ಆರಂಭವಾಗಲಿದ್ದು, ಟಿ-20 ಮಾದರಿಯಲ್ಲಿ ಎಲ್ಲ ಪಂದ್ಯಗಳು ನಡೆಯಲಿವೆ.
ಏಷ್ಯಾಕಪ್ ಟೂರ್ನಿಗಾಗಿ ಕ್ವಾಲಿಫೈಯರ್ ಪಂದ್ಯಗಳು ಆಗಸ್ಟ್ 20ರಿಂದ ಆರಂಭಗೊಳ್ಳಲಿದ್ದು, ಟೂರ್ನಿ ಆಗಸ್ಟ್ 27ರಿಂದ ಆರಂಭಗೊಂಡು ಸೆಪ್ಟಂಬರ್ 11ರಂದು ಮುಕ್ತಾಯಗೊಳ್ಳಲಿದೆ. ಇದಕ್ಕೆ ಸಂಬಂಧಿಸಿದಂತೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಟ್ವಿಟರ್ ಮೂಲಕ ಅಧಿಕೃತ ಮಾಹಿತಿ ಹೊರಹಾಕಿದೆ.
ಪ್ರತಿ ಎರಡು ವರ್ಷಕ್ಕೊಮ್ಮೆ ಏಷ್ಯಾಕಪ್ ಟೂರ್ನಿ ನಡೆಸಲಾಗುತ್ತದೆ. ಆದರೆ, ಕೋವಿಡ್ನಿಂದಾಗಿ 2020ರ ಟೂರ್ನಿ ರದ್ದುಗೊಳಿಸಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಪ್ರಕಟಣೆ ಹೊರಡಿಸಿತ್ತು. ಆದರೆ, 2021ರಲ್ಲಿ ಟೂರ್ನಿ ನಡೆಸಲು ಎಸಿಸಿ ಕ್ರಮ ಕೈಗೊಂಡಿತ್ತು. ಈ ವೇಳೆ ಕೋವಿಡ್ ಮತ್ತಷ್ಟು ಉಲ್ಬಣಗೊಳ್ಳುತ್ತಿದ್ದಂತೆ ಟೂರ್ನಿ ಮುಂದೂಡಿಕೆ ಮಾಡಲಾಗಿತ್ತು.
14ನೇ ಆವೃತ್ತಿ ಏಷ್ಯಾ ಕಪ್ ಟೂರ್ನಿ ಇದಾಗಿದ್ದು, 1984ರಿಂದಲೂ ನಡೆಯುತ್ತಿರುವ ಈ ಟೂರ್ನಾಮೆಂಟ್ನಲ್ಲಿ ಭಾರತ ಏಳು ಸಲ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಉಳಿದಂತೆ ಶ್ರೀಲಂಕಾ ಐದು ಸಲ ಚಾಂಪಿಯನ್ ಆಗಿದ್ದು, ಪಾಕಿಸ್ತಾನ ಕೇವಲ ಎರಡು ಸಲ ಪ್ರಶಸ್ತಿ ಗೆದ್ದಿದೆ.
2022ರ ಏಷ್ಯಾಕಪ್ನಲ್ಲಿ ಭಾರತ, ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ, ಆಫ್ಘಾನಿಸ್ತಾನ ಸೇರಿದಂತೆ ಒಂದು ಕ್ವಾಲಿಫೈಯರ್ ತಂಡ ಭಾಗಿಯಾಗಲಿದೆ. ಕ್ವಾಲಿಫೈಯರ್ನಲ್ಲಿ ಯುಎಇ ಮತ್ತು ಕುವೈತ್ ಸೆಣಸಾಟ ನಡೆಸಲಿವೆ.
ಇದನ್ನೂ ಓದಿ:ಆಸ್ಟ್ರೇಲಿಯಾ ವಿರುದ್ಧ ವಿರೋಚಿತ ಸೋಲು ಕಂಡ ಭಾರತ.. ಸೆಮಿಫೈನಲ್ ಹಾದಿ ಕಠಿಣ..
2018ರಲ್ಲಿ ಕೊನೆಯ ಬಾರಿ ಏಷ್ಯಾಕಪ್ ನಡೆದಿತ್ತು. ನಂತರ 2020ರ ಆವೃತ್ತಿಯನ್ನು ಶ್ರೀಲಂಕಾಗೆ ಸ್ಥಳಾಂತರಿಸಲಾಗಿತ್ತು. ಆದರೆ, ಕಳೆದ ವರ್ಷ ವಿಶ್ವದಾದ್ಯಂತ ಕೋವಿಡ್ 19 ಸಾಂಕ್ರಾಮಿಕವಿದ್ದ ಕಾರಣ 2021 ಜೂನ್ಗೆ ಮುಂದೂಡಲಾಗಿತ್ತು. ಆದರೆ ಆತಿಥ್ಯ ವಹಿಸಿಕೊಳ್ಳಬೇಕಿದ್ದ ಶ್ರೀಲಂಕಾದಲ್ಲಿ ಕೊರೊನಾ ಏರಿಕೆಯಾಗಿದ್ದ ಕಾರಣ ಮತ್ತೊಮ್ಮೆ ಮುಂದೂಡಿಕೆ ಮಾಡಲಾಗಿತ್ತು. ಇದೀಗ ದಿನಾಂಕ ನಿಗದಿಯಾಗಿದೆ.