ದುಬೈ(ಯುಎಇ): ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿಂದು ಸಂಜೆ ಟೀಂ ಇಂಡಿಯಾ ತನ್ನ 2ನೇ ಪಂದ್ಯದಲ್ಲಿ ಹಾಂಗ್ ಕಾಂಗ್ ತಂಡವನ್ನು ಎದುರಿಸುತ್ತಿದೆ. ಈ ಪಂದ್ಯ ಗೆದ್ದು ನೇರವಾಗಿ ಸೂಪರ್ ಫೋರ್‌ಗೆ ಲಗ್ಗೆ ಇಡಲು ರೋಹಿತ್ ಶರ್ಮಾ ಬಳಗ ತವಕಿಸುತ್ತಿದೆ.
ಹಾಂಗ್ ಕಾಂಗ್ ತಂಡವು ಟೂರ್ನಿಯ ಮೊದಲ ಪಂದ್ಯದಲ್ಲೇ ಬಲಿಷ್ಠ ಭಾರತವನ್ನು ಎದುರಿಸುತ್ತಿದೆ. ಇನ್ನೊಂದೆಡೆ, ಸಾಂಪ್ರದಾಯಿಕ ಬದ್ಧ ಎದುರಾಳಿ ತಂಡವಾದ ಪಾಕಿಸ್ತಾನವನ್ನು ರೋಚಕ ಕಾದಾಟದಲ್ಲಿ ಮಣಿಸಿದ ಟೀಂ ಇಂಡಿಯಾ ಈ ಪಂದ್ಯವನ್ನು ನಿರಾಯಾಸವಾಗಿ ಕೈವಶ ಮಾಡಿಕೊಳ್ಳುವ ಆತ್ಮವಿಶ್ವಾಸದಲ್ಲಿದೆ. ಹಾಗಾಗಿ, ಇಂದಿನ ಪಂದ್ಯದಲ್ಲಿ ಭಾರತವೇ ಗೆಲ್ಲುವ ಹಾಟ್ ಫೇವರೇಟ್ ಟೀಂ.
ಹಾಗಂತ, ಟೀಂ ಇಂಡಿಯಾ ಹಾಂಗ್‌ಕಾಂಗ್ ಅನ್ನು ಸರಳವಾಗಿ ಪರಿಗಣಿಸುವಂತಿಲ್ಲ. ಕಳೆದ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ಈ ತಂಡದ ವಿರುದ್ಧ ಗೆದ್ದಿದ್ದು ಕೇವಲ 26 ರನ್‌ಗಳ ಅಂತರದಿಂದ ಅನ್ನೋದಿಲ್ಲಿ ಗಮನಾರ್ಹ.
ಈ ಸಲದ ಮೊದಲ ಪಂದ್ಯದಲ್ಲಿ ಪಾಕ್ ವಿರುದ್ಧ ಗೆದ್ದರೂ ಅಲ್ಲಿ ಟೀಂ ಇಂಡಿಯಾ ಸಾಮರ್ಥ್ಯದ ಪರೀಕ್ಷೆಯೂ ನಡೆದಿದೆ. ಏಕೆಂದರೆ, ಟಾಪ್ ಆರ್ಡರ್ ಬ್ಯಾಟರ್‌ಗಳಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಯಾದವ್ ಬ್ಯಾಟ್‌ನಿಂದ ಹೇಳಿಕೊಳ್ಳುವ ಪ್ರದರ್ಶನ ಕಂಡುಬರಲಿಲ್ಲ. ಹಾಗಾಗಿ, ಇಂದಿನ ಪಂದ್ಯದಲ್ಲಿ ಈ ಆಟಗಾರರು ಚೇತರಿಸಿಕೊಂಡು ಮರಳಿ ಫಾರ್ಮ್ ಕಂಡುಕೊಳ್ಳಲು ಸೂಕ್ತ ವೇದಿಕೆಯೂ ಆಗಲಿದೆ.
ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ ಮತ್ತು ದೀಪಕ್ ಹೂಡಾ ಅವರಿಂದ ಕೂಡಿದ ತಂಡದ ಮಧ್ಯಮ ಕ್ರಮಾಂಕ ಸದ್ಯಕ್ಕೆ ಬಲಿಷ್ಠ. ಆದ್ರೆ ಆಟಗಾರರು ತಮ್ಮ ಪ್ರದರ್ಶನದಲ್ಲಿ ಸ್ಥಿರತೆ ಕಾಯ್ದುಕೊಳ್ಳುವ ಅವಶ್ಯಕತೆ ಇದೆ. ಅದ್ರಲ್ಲೂ ಟಾಪ್ ಆರ್ಡರ್ ಬ್ಯಾಟರ್‌ಗಳಲ್ಲಿ ಗುರುತರ ಪ್ರದರ್ಶನ ಬರದೇ ಇದ್ದಾಗ ಮಧ್ಯಮ ಕ್ರಮಾಂಕದ ಹೊಣೆ ಹೆಚ್ಚಿರುತ್ತದೆ. ಹಾಗಾಗಿ, ಮುಂದೆಯೂ ಪಾಂಡ್ಯ, ಸೂರ್ಯಕುಮಾರ್ ಯಾದವ್ ಹಾಗು ರವೀಂದ್ರ ಜಡೇಜಾ ಮೇಲೆ ಹೆಚ್ಚು ಗಮನ ಕೇಂದ್ರೀಕೃತವಾಗಲಿದೆ.