ದುಬೈ:ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ 5 ವಿಕೆಟ್ಗಳ ರೋಚಕ ಗೆಲುವು ದಾಖಲು ಮಾಡಿರುವ ಟೀಂ ಇಂಡಿಯಾ ಏಷ್ಯಾಕಪ್ನಲ್ಲಿ ಗೆಲುವಿನ ಖಾತೆ ಓಪನ್ ಮಾಡಿದೆ. ಇದರ ಜತೆಗೆ ಐಸಿಸಿ ಟಿ20 ವಿಶ್ವಕಪ್ ಸೋಲಿನ ಸೇಡು ತೀರಿಸಿಕೊಂಡಿದೆ. ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ರೋಹಿತ್ ಬಳಗ 5 ವಿಕೆಟ್ಗಳ ಗೆಲುವು ದಾಖಲು ಮಾಡಿದೆ. ತಂಡದ ಪರ ಹಾರ್ದಿಕ್ ಪಾಂಡ್ಯ ಆಲ್ರೌಂಡ್ ಆಟ ಪ್ರದರ್ಶಿಸಿ, ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.
ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ ತಂಡ 19.5 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 147ರನ್ಗಳಿಸಿತು. ಇದರ ಬೆನ್ನತ್ತಿದ ಟೀಂ ಇಂಡಿಯಾ 19.4 ಓವರ್ಗಳಲ್ಲಿ 148ರನ್ಗಳಿಸಿ ಗೆಲುವಿನ ನಗೆ ಬೀರಿತು. ಟೀಂ ಇಂಡಿಯಾ ಪರ ಕೊಹ್ಲಿ, ಜಡೇಜಾ, ಪಾಂಡ್ಯ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಬೌಲಿಂಗ್ನಲ್ಲಿ ಭುವನೇಶ್ವರ್ ಕುಮಾರ್ 4ವಿಕೆಟ್, ಹಾರ್ದಿಕ್ ಪಾಂಡ್ಯ 3 ವಿಕೆಟ್ ಪಡೆದರೆ, ಇವರಿಗೆ ಸಾಥ್ ನೀಡಿದ ಅರ್ಷದೀಪ್ 2 ಹಾಗೂ ಆವೇಶ್ ಖಾನ್ 1ವಿಕೆಟ್ ಕಿತ್ತರು. ಪಾಕಿಸ್ತಾನದ ಪರ ರಿಜ್ವಾನ್(42ರನ್) ಬ್ಯಾಟಿಂಗ್ನಲ್ಲಿ ಮಿಂಚಿದರು.
ಪಾಕಿಸ್ತಾನ ಇನ್ನಿಂಗ್ಸ್: ಟಾಸ್ ಸೋತು ಇನಿಂಗ್ಸ್ ಆರಂಭಿಸಿದ್ದ ಪಾಕ್ ಉತ್ತಮ ಆರಂಭ ಪಡೆದುಕೊಳ್ಳುವಲ್ಲಿ ವಿಫಲವಾಯಿತು. ಪಂದ್ಯದ ಮೂರನೇ ಓವರ್ನಲ್ಲಿ ಭುವನೇಶ್ವರ್ ಕುಮಾರ್ ಪಾಕ್ ನಾಯಕ ಬಾಬರ್ ಆಜಂ (10) ಗೆ ಪೆವಿಲಿಯನ್ ಹಾದಿ ತೋರಿಸಿದ್ದರು. ಇದಾದ ಬಳಿಕ ಮೊಹಮ್ಮದ್ ರಿಜ್ವಾನ್ ಹಾಗೂ ಫಖರ್ ಝಮಾನ್ ನಿಧಾನಗತಿ ಬ್ಯಾಟಿಂಗ್ ಮೊರೆ ಹೋದರು.ಆದರೆ, ಫಖರ್ ವಿಕೆಟ್ ಪಡೆದುಕೊಳ್ಳುವಲ್ಲಿ ಆವೇಶ್ ಯಶಸ್ವಿಯಾದರು. ಮೊದಲ 10 ಓವರ್ಗಳಲ್ಲಿ ಪಾಕ್ 68 ರನ್ ಕಲೆಹಾಕಿತು.
ಉತ್ತಮವಾಗಿ ಆಡ್ತಿದ್ದ ಇಫ್ತಿಕರ್ ಅಹ್ಮದ್ (28) ವಿಕೆಟ್ ಪಾಂಡ್ಯ ಪಡೆದುಕೊಂಡರು. ರಿಜ್ವಾನ್ (42) ಕೂಡ ಪಾಂಡ್ಯಗೆ ಬಲಿಯಾದರು. ಇದರ ಬೆನ್ನಲ್ಲೇ ಖುಷ್ದಿಲ್ ಶಾ (7) ಜಡೇಜಾಗೆ ಕ್ಯಾಚ್ ನೀಡಿ ಹೊರನಡೆದರು.ಪಾಕ್ 15ನೇ ಓವರ್ನಲ್ಲಿ 100 ರನ್ಗಳ ಗಟಿದಾಡುವಷ್ಟರಲ್ಲಿ 5 ಪ್ರಮುಖ ವಿಕೆಟ್ ಕಳೆದುಕೊಂಡಿತು.ಕೊನೆಯದಾಗಿ ತಂಡ 19.5 ಓವರ್ಗಳಲ್ಲಿ 147 ರನ್ಗಳಿಗೆ ಆಲೌಟ್ ಆಯಿತು.