ದುಬೈ:ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವಿನ 15ನೇ ಆವೃತ್ತಿಯ ಏಷ್ಯಾ ಕಪ್ ಫೈನಲ್ ಪಂದ್ಯಕ್ಕೆ ದುಬೈ ಕ್ರೀಡಾಂಗಣ ಸಜ್ಜಾಗಿದೆ. ಇಂದು ರಾತ್ರಿ ನಡೆಯುವ ಕಾಳಗದಲ್ಲಿ ಉಭಯ ತಂಡಗಳು ಗೆದ್ದು ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಹುಮ್ಮಸ್ಸಿನಲ್ಲಿವೆ.
ಸ್ಟಾರ್ ಆಟಗಾರರ ಕೊರತೆ ಮಧ್ಯೆಯೂ ಶ್ರೀಲಂಕಾ ಬಿಸಿರಕ್ತದ ಯುವಕರ ಹೋರಾಟದಿಂದ ಭಾರತ, ಪಾಕಿಸ್ತಾನದಂತಹ ತಂಡಗಳನ್ನು ಮೆಟ್ಟಿ ಫೈನಲ್ ತಲುಪಿದೆ. ನಾಯಕ ದಸುನ್ ಶನಕ ನೇತೃತ್ವದ ತಂಡ ಆರನೇ ಬಾರಿಗೆ ಏಷ್ಯಾ ಕಪ್ ಎತ್ತಲು ತುದಿಗಾಲ ಮೇಲೆ ನಿಂತಿದೆ.
ಇನ್ನೊಂದೆಡೆ ಪಾಕಿಸ್ತಾನ ಕೂಡ ದೀರ್ಘ ಸಮಯದ ಬಳಿಕ ಮತ್ತೆ ಫೈನಲ್ ತಲುಪಿದ್ದು, 3ನೇ ಬಾರಿಗೆ ಪ್ರಶಸ್ತಿಯನ್ನು ಬಾಚಿಕೊಳ್ಳುವ ಇರಾದೆಯಲ್ಲಿದೆ. ಉಭಯ ತಂಡಗಳು ಏಷ್ಯಾಕಪ್ ಫೈನಲ್‌ನಲ್ಲಿ ಮೂರು ಬಾರಿ ಎದುರಾಗಿವೆ. ಇದರಲ್ಲಿ ಶ್ರೀಲಂಕಾ 2 ಬಾರಿ (1986, 2014ರಲ್ಲಿ) ಗೆಲುವು ಪಡೆದರೆ, ಪಾಕಿಸ್ತಾನ ಒಂದು ಬಾರಿ(2000 ರಲ್ಲಿ) ಮಾತ್ರ ಜಯಿಸಿದೆ.
ಲಂಕಾಗೆ 6, ಪಾಕ್ಗೆ 3 ನೇ ಪ್ರಶಸ್ತಿ ಗುರಿ:ದ್ವೀಪರಾಷ್ಟ್ರ ಶ್ರೀಲಂಕಾಗೆ 1986, 1997, 2004, 2008 ಮತ್ತು 2014 ರಲ್ಲಿ ಏಷ್ಯಾ ಕಪ್ ಗೆದ್ದಿದೆ. ಏಳು ಬಾರಿ ಕಪ್ ಗೆದ್ದ ಭಾರತದ ಬಳಿಕ ಅತಿಹೆಚ್ಚು ಬಾರಿ ಪ್ರಶಸ್ತಿ ಗೆದ್ದ ತಂಡವಾಗಿದೆ. 2000 ಮತ್ತು 2012ರಲ್ಲಿ ಪಾಕಿಸ್ತಾನ ಎರಡು ಬಾರಿ ಮಾತ್ರ ಪ್ರಶಸ್ತಿ ಗೆದ್ದಿದೆ.
ಶ್ರೀಲಂಕಾದ ಫೈನಲ್ ಹಾದಿ:ಈ ಬಾರಿಯ ಏಷ್ಯಾ ಕಪ್ನಲ್ಲಿ ಶ್ರೀಲಂಕಾ ಅಫ್ಘಾನಿಸ್ತಾನ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಹೀನಾಯವಾಗಿ ಸೋಲುವ ಮೂಲಕ ಅಭಿಯಾನ ಆರಂಭಿಸಿತ್ತು. ಮುಂದಿನ ಎಲ್ಲ ಪಂದ್ಯಗಳಲ್ಲಿ ಗೆಲ್ಲುವ ಮೂಲಕ ಮುನ್ನುಗ್ಗುತ್ತಿದೆ. ಗುಂಪು ಹಂತದಲ್ಲಿ ಬಾಂಗ್ಲಾದೇಶ ವಿರುದ್ಧ 2 ವಿಕೆಟ್ ಗೆಲುವು ಪಡೆದು ಸೂಪರ್ ಫೋರ್ ಹಂತಕ್ಕೆ ಅರ್ಹತೆ ಪಡೆಯಿತು.
ಸೂಪರ್ 4 ಹಂತದಲ್ಲಿ ಆಫ್ಘಾನಿಸ್ತಾನ ವಿರುದ್ಧ ಗೆದ್ದು ಗುಂಪು ಹಂತದ ಸೋಲಿಗೆ ಮುಯ್ಯಿ ತೀರಿಸಿಕೊಂಡಿತು. ಪ್ರಶಸ್ತಿ ಗೆಲ್ಲುವ ಫೇವರೇಟ್ ತಂಡವಾಗಿದ್ದ ಬಲಿಷ್ಠ ಭಾರತವನ್ನು ಬಗ್ಗುಬಡಿಯಿತು. ಈ ಮೂಲಕ ಫೈನಲ್ ಟಿಕೆಟ್ ಪಡೆಯಿತು. ಕೊನೆಯ ಪಂದ್ಯದಲ್ಲೂ ಪಾಕಿಸ್ತಾನವನ್ನೂ ಸೋಲಿಸಿ ಆತ್ಮವಿಶ್ವಾಸ ವೃದ್ಧಿಸಿಕೊಂಡಿದೆ. ಟೂರ್ನಿಯಲ್ಲಿ ತಾನಾಡಿದ ಐದು ಪಂದ್ಯಗಳಲ್ಲಿ 1ರಲ್ಲಿ ಸೋತು 4 ರಲ್ಲಿ ಗೆದ್ದಿದೆ.