ಮುಂಬೈ:ಮುಂಬರುವ 15ನೇ ಆವೃತ್ತಿಯ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ವೇಳಾಪಟ್ಟಿ ಪ್ರಕಟಗೊಂಡಿದ್ದು, ಆಗಸ್ಟ್ 28ರಂದು ನಡೆಯಲಿರುವ ಹೈ ವೋಲ್ಟೇಜ್ ಪಂದ್ಯದಲ್ಲಿ ಭಾರತ-ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಗ್ರೂಪ್ ಎ ವಿಭಾಗದಲ್ಲಿ ಉಭಯ ತಂಡಗಳು ದುಬೈ ಮೈದಾನದಲ್ಲಿ ಸೆಣಸಾಟ ನಡೆಸಲಿವೆ. ಟೂರ್ನಿಗೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್ ಮಂಡಳಿಯ ಸೆಕ್ರೆಟರಿ ಜಯ್ ಶಾ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದು, ಯಾವ ದಿನಾಂಕದಂದು ಯಾವೆಲ್ಲ ಪಂದ್ಯಗಳು ನಡೆಯಲಿವೆ ಎಂಬುದನ್ನು ತಿಳಿಸಿದ್ದಾರೆ.
ಇದನ್ನೂ ಓದಿ:ಶ್ರೀಲಂಕಾದಿಂದ ಏಷ್ಯಾಕಪ್ ಔಟ್... ಯುಎಇನಲ್ಲಿ ಟೂರ್ನಿ ಆಯೋಜನೆ ಎಂದ ಸೌರವ್ ಗಂಗೂಲಿ
ಈ ಸಲದ ಏಷ್ಯಾಕಪ್ ಶ್ರೀಲಂಕಾದಲ್ಲಿ ಆಯೋಜನೆಗೊಳ್ಳಬೇಕಾಗಿತ್ತು. ಆದರೆ, ಆರ್ಥಿಕ ಸಂಕಷ್ಟದಿಂದಾಗಿ ಲಂಕಾ ಕ್ರಿಕೆಟ್ ಬೋರ್ಡ್ ಟೂರ್ನಿ ಆಯೋಜನೆಯಿಂದ ಹಿಂದೆ ಸರಿದಿದೆ. ಹೀಗಾಗಿ, ಯುಎಇನಲ್ಲಿ ಪ್ರಸಕ್ತ ಸಾಲಿನ ಟೂರ್ನಿ ನಡೆಯಲಿದೆ. ಮಹತ್ವದ ಸರಣಿಯಲ್ಲಿ ಶ್ರೀಲಂಕಾ, ಅಫ್ಘಾನಿಸ್ತಾನ, ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಸೇರಿದಂತೆ ಮತ್ತೊಂದು ಕ್ವಾಲಿಫೈಯರ್ ತಂಡವೂ ಭಾಗಿಯಾಗಲಿದೆ. ಆಗಸ್ಟ್ 27ರಿಂದ ಸರಣಿ ಆರಂಭಗೊಳ್ಳಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ಮುಖಾಮುಖಿಯಾಗಲಿವೆ. ಆಗಸ್ಟ್ 27ರಿಂದ ಸೆಪ್ಟೆಂಬರ್ 11ರವರೆಗೆ ಟೂರ್ನಿ ನಿಗದಿಯಾಗಿದೆ.