ದುಬೈ(ಯುಎಇ): ಏಷ್ಯಾ ಕಪ್ನ ಸೂಪರ್ 4 ಹಂತದ ಮೊದಲ ಪಂದ್ಯದಲ್ಲಿ ಪಾಕ್ ವಿರುದ್ಧ ಸೋಲು ಕಂಡಿರುವ ಟೀಂ ಇಂಡಿಯಾ ಇಂದಿನ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೊಳಗಾಗಿದೆ. ಶ್ರೀಲಂಕಾ ವಿರುದ್ಧ ಪಂದ್ಯ ನಡೆಯಲಿದ್ದು, ಫೈನಲ್ ಆಸೆ ಜೀವಂತವಾಗಿರಿಸಿಕೊಳ್ಳಲು ಈ ಗೆಲುವು ರೋಹಿತ್ ಬಳಗಕ್ಕೆ ಅತ್ಯಂತ ಅನಿವಾರ್ಯ. ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಪಂದ್ಯ ನಡೆಯಲಿದ್ದು, ಈಗಾಗಲೇ ಅಫ್ಘಾನಿಸ್ತಾನ ವಿರುದ್ಧ ಗೆಲುವು ಸಾಧಿಸಿರುವ ಸಿಂಹಳೀಯರು ಕೂಡಾ ಆತ್ಮವಿಶ್ವಾಸದಿಂದ ಕಣಕ್ಕಿಳಿಯಲಿದ್ದಾರೆ.
ಟಿ20 ಕ್ರಿಕೆಟ್ನಲ್ಲಿ ಭಾರತ-ಶ್ರೀಲಂಕಾ 25 ಪಂದ್ಯಗಳಲ್ಲಿ ಎದುರುಬದುರಾಗಿವೆ. ಈ ಪೈಕಿ ಲಂಕಾ 7 ಪಂದ್ಯಗಳಲ್ಲಿ ಗೆದ್ದಿದೆ. ಭಾರತ 17 ಸಲ ಗೆಲುವಿನ ನಗೆ ಬೀರಿದೆ. ಆದರೆ, ಏಷ್ಯಾ ಕಪ್ನಲ್ಲಿ ಉಭಯ ತಂಡಗಳದ್ದು ಸಮಬಲದ ಸಾಧನೆ. ಟೂರ್ನಿಯಲ್ಲಿ ಉಭಯ ತಂಡಗಳು 20 ಪಂದ್ಯಗಳಲ್ಲಿ ಆಡಿವೆ. ಇದರಲ್ಲಿ ಭಾರತ ಹಾಗೂ ಶ್ರೀಲಂಕಾ ತಲಾ 10 ಪಂದ್ಯಗಳಲ್ಲಿ ಗೆದ್ದಿವೆ.
ಇದನ್ನೂ ಓದಿ:'ಟೆಸ್ಟ್ ನಾಯಕತ್ವ ತೊರೆದಾಗ ಧೋನಿ ಹೊರತುಪಡಿಸಿ ಮತ್ಯಾರೂ ಸಂದೇಶ ಕಳುಹಿಸಲಿಲ್ಲ': ಕೊಹ್ಲಿ
ಪಾಕ್ ಎದುರಿನ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್‌ಗಳು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದರು. ಆಲ್ರೌಂಡರ್ ಜಡೇಜಾ ಇಲ್ಲದಿರುವುದು ತಂಡಕ್ಕೆ ಹೆಚ್ಚಿನ ಸಂಕಷ್ಟ ತಂದೊಡ್ಡಿದೆ. ಲೀಗ್ ಹಂತದಲ್ಲಿ ಪಾಕ್ ವಿರುದ್ಧ ಅಬ್ಬರಿಸಿದ್ದ ಹಾರ್ದಿಕ್ ತದನಂತರದ ಪಂದ್ಯದಲ್ಲಿ ಸಂಪೂರ್ಣವಾಗಿ ಕಳೆಗುಂದಿದರು. ಚಹಲ್ ಕೈಚಳಕ ನಡೆಯುತ್ತಿಲ್ಲ. ಹೀಗಾಗಿ, ಭುವನೇಶ್ವರ್ ಕುಮಾರ್, ಅರ್ಷ್‌ದೀಪ್ ಹಾಗೂ ಬಿಷ್ಣೋಯ್ ಮೇಲೆ ಹೆಚ್ಚಿನ ಒತ್ತಡವಿದೆ. ಆದರೆ, ಕಳೆದ ಪಂದ್ಯದಲ್ಲಿ ಬ್ಯಾಟಿಂಗ್ನಲ್ಲಿ ರಾಹುಲ್, ರೋಹಿತ್, ವಿರಾಟ್ ಅಬ್ಬರಿಸಿದ್ದು, ಇಂದಿನ ಪಂದ್ಯದಲ್ಲಿ ಅವರ ಬ್ಯಾಟ್‌ನಿಂದ ಮತ್ತಷ್ಟು ರನ್ ಹರಿದುಬರಬೇಕಿದೆ.
ಲೀಗ್ ಹಂತದಲ್ಲಿ ಬಾಂಗ್ಲಾ ವಿರುದ್ಧದ ಪಂದ್ಯ ಹಾಗೂ ಸೂಪರ್ 4 ಹಂತದಲ್ಲಿ ಅಫ್ಘಾನಿಸ್ತಾನ ವಿರುದ್ಧ ಗೆಲುವು ಸಾಧಿಸಿರುವ ಲಂಕಾ, ಭಾರತಕ್ಕೆ ತಿರುಗೇಟು ನೀಡುವ ಮೂಲಕ ಫೈನಲ್ ಹಾದಿ ಸುಗಮ ಮಾಡಿಕೊಳ್ಳುವ ತವಕದಲ್ಲಿದೆ.