ದುಬೈ(ಯುಎಇ): ಏಷ್ಯಾ ಕಪ್ 2022 ಟೂರ್ನಿಯ ಎರಡನೇ ಪಂದ್ಯದಲ್ಲಿ ನಿನ್ನೆ ಸಾಂಪ್ರದಾಯಿಕ ಎದುರಾಳಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಈ ರಣರೋಚಕ ಪಂದ್ಯವನ್ನು ವಿಶ್ವದೆಲ್ಲೆಡೆ ಕೋಟ್ಯಂತರ ಕ್ರೀಡಾಪ್ರೇಮಿಗಳು ವೀಕ್ಷಿಸಿ ಖುಷಿಪಟ್ಟಿದ್ದಾರೆ. ಪಂದ್ಯದ ಕೊನೆಯವರೆಗೂ ಉಭಯ ತಂಡಗಳ ಗೆಲುವು ಸಂಭವನೀಯತೆ ಶೇ 50-50 ಯಂತೆ ಸಾಗಿದ್ದು ಅಭಿಮಾನಿಗಳು ಹಲ್ಲು ಕಚ್ಚಿಕೊಂಡು ಪಂದ್ಯ ನೋಡಿದ್ದಾರೆ.
ಪಾಕ್ ನೀಡಿದ ಸರಳ ಗುರಿ ಬೆನ್ನತ್ತುವಾಗ ಭಾರತ ರೋಹಿತ್ ಶರ್ಮಾ, ಕೆ ಎಲ್ ರಾಹುಲ್, ಸೂರ್ಯ ಕುಮಾರ್ ಯಾದವ್ ಹಾಗು ಕೊಹ್ಲಿ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭದಲ್ಲಿ ತಂಡಕ್ಕೆ ಆಸರೆಯಾದವರು ಹಾರ್ದಿಕ್ ಪಾಂಡ್ಯ. ಬೌಲಿಂಗ್‌ನಲ್ಲಿ ಪಾಕ್ ಆಟಗಾರರಿಗೆ ನಡುಕ ಹುಟ್ಟಿಸಿ ಬ್ಯಾಟಿಂಗ್‌ನಲ್ಲೂ ಲೀಲಾಜಾಲ ಪ್ರದರ್ಶನ ನೀಡಿದ ಪಾಂಡ್ಯ ಪಂದ್ಯವನ್ನು ಸಿಕ್ಸರ್ ಮೂಲಕವೇ ಮುಗಿಸಿ ಭಾರತಕ್ಕೆ ಅಭೂತಪೂರ್ವ ಗೆಲುವು ತಂದಿತ್ತರು.