ದುಬೈ:ಏಷ್ಯಾ ಕಪ್ ಟೂರ್ನಿಯ ಸೂಪರ್ 4 ಹಂತದ ಕೊನೆಯ ಪಂದ್ಯದಲ್ಲಿ ಭಾರತ ವಿರುದ್ಧದ ಪಂದ್ಯದಲ್ಲಿ ಅಫ್ಘಾನಿಸ್ತಾನ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದೆ. ದುಬೈ ಕ್ರೀಡಾಂಗಣದಲ್ಲಿ ನಡೆಯುವ ಈ ಪಂದ್ಯ ಉಭಯ ತಂಡಗಳಿಗೆ ಔಪಚಾರಿಕವಾಗಿದೆ.
ಟೂರ್ನಿಯಿಂದ ಈಗಾಗಲೇ ಆಫ್ಘನ್ ಮತ್ತು ಭಾರತ ಹೊರಬಿದ್ದಿದ್ದು, ಇಲ್ಲಿ ಯಾರೇ ಗೆದ್ದರೂ ಹೆಚ್ಚಿನ ಮಹತ್ವವಿಲ್ಲ. ಸೆಪ್ಟೆಂಬರ್ನಲ್ಲಿ ನಡೆಯುವ ವಿಶ್ವಕಪ್ಗೆ ಪೂರ್ವ ತಯಾರಿ ಎಂಬಂತೆ ಈ ಪಂದ್ಯವನ್ನು ಉಭಯ ತಂಡಗಳು ಪರಿಗಣಿಸಿವೆ.
ತಂಡದಲ್ಲಿ ಮೂರು ಬದಲಾವಣೆ:ಆಫ್ಘನ್ ವಿರುದ್ಧದ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಿದ್ದು, ಕನ್ನಡಿಗ ಕೆ.ಎಲ್. ರಾಹುಲ್ಗೆ ಕ್ಯಾಪ್ಟನ್ ಹೊಣೆ ನೀಡಲಾಗಿದೆ. ಇದಲ್ಲದೇ, ಆಲ್ರೌಂಡರ್ ಹಾರ್ದಿಕ್ ಪಾಂಡ್ಯಾ, ಸ್ಪಿನ್ನರ್ ಯಜುವೇಂದ್ರ ಚಹಲ್ಗೂ ವಿಶ್ರಾಂತಿ ನೀಡಲಾಗಿದ್ದು, ಬೆಂಚ್ ಕಾದಿದ್ದ ದಿನೇಶ್ ಕಾರ್ತಿಕ್, ದೀಪಕ್ ಚಹರ್ಗೆ ಅವಕಾಶ ನೀಡಲಾಗಿದೆ. ವೇಗಿ ದೀಪಕ್ ಚಹರ್, ಅನಾರೋಗ್ಯಕ್ಕೀಡಾದ ಆವೇಶ್ ಖಾನ್ ಟೂರ್ನಿಯಿಂದ ಹೊರಬಿದ್ದ ಕಾರಣ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು.