ರೋಸೋ (ಡೊಮಿನಿಕಾ): ಭಾರತ ಕ್ರಿಕೆಟ್ ತಂಡದ ಅನುಭವಿ ಬೌಲರ್ ರವಿಚಂದ್ರನ್ ಅಶ್ವಿನ್ ಅವರು ವೆಸ್ಟ್ ಇಂಡೀಸ್ ವಿರುದ್ಧದ ಎರಡು ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಹಲವು ದಾಖಲೆಗಳನ್ನು ಸೃಷ್ಟಿಸಿದ್ದಾರೆ. 5 ವಿಕೆಟ್ಗಳನ್ನು ಪಡೆದ ದಾಖಲೆ ಒಂದೆಡೆಯಾದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ ತಂದೆ- ಮಗನನ್ನು ಪಾದಾರ್ಪಣೆ ಪಂದ್ಯದಲ್ಲೇ ಔಟ್ ಮಾಡಿದ ಭಾರತದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಬುಧವಾರ ನಡೆದ ಮೊದಲ ಟೆಸ್ಟ್ನ ಪ್ರಥಮ ಇನ್ನಿಂಗ್ಸ್‌ನಲ್ಲಿ ಅಶ್ವಿನ್ ಟಾಗೆನರೈನ್ ಚಂದ್ರಪಾಲ್‌ರನ್ನು ಬೌಲ್ಡ್ ಮಾಡಿ ಪೆವಿಲಿಯನ್ಗೆ ಕಳುಹಿಸಿದರು. 2011ರಲ್ಲಿ ದೆಹಲಿಯಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಾದಾರ್ಪಣೆ ಟೆಸ್ಟ್ ಪಂದ್ಯದಲ್ಲಿ ಟಾಗೆನರೈನ್ ಅವರ ತಂದೆ ಶಿವನಾರಾಯಣ್ ಚಂದ್ರಪಾಲ್ ಅವರ ವಿಕೆಟ್ ಪಡೆಯುವಲ್ಲಿಯೂ ಅಶ್ವಿನ್ ಯಶಶ್ವಿಯಾಗಿದ್ದರು. 12 ವರ್ಷಗಳ ಹಿಂದೆ ನಡೆದ ಆ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಅಶ್ವಿನ್ ಅವರು ಶಿವನಾರಾಯಣ್ ಚಂದ್ರಪಾಲ್ ಅವರನ್ನು ಎಲ್ಬಿ ಬಲೆಗೆ ಬೀಳಿಸಿದ್ದರು. ಇದರೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅಪ್ಪ-ಮಗನ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಾಧನೆಗೈದ ಮೊದಲ ಭಾರತೀಯ ಬೌಲರ್ ಕೂಡ ಇವರೇ ಆಗಿದ್ದು, ವಿಶ್ವದ 5ನೇ ಬೌಲರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಇಂಗ್ಲೆಂಡ್, ಪಾಕಿಸ್ತಾನ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಬೌಲರ್‌ಗಳು ಇಂಥ ಸಾಧಕರಾಗಿದ್ದರು.
ಈ ಹಿಂದೆಯೂ ಟಾಗೆನರೈನ್ ಚಂದ್ರಪಾಲ್ ಮತ್ತ ಅವರ ತಂದೆ ಶಿವನಾರಾಯಣ್ ಚಂದ್ರಪಾಲ್ ವಿಕೆಟ್ಅನ್ನು ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಬೌಲರ್‌ಗಳು ಉರುಳಿಸಿದ್ದರು. ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಮತ್ತು ದಕ್ಷಿಣ ಆಫ್ರಿಕಾದ ಆಫ್-ಸ್ಪಿನ್ನರ್ ಸೈಮನ್ ಹಾರ್ಮರ್ ಅವರು ಶಿವನಾರಾಯಣ್ ಮತ್ತು ಟಾಗೆನರೈನ್ ಅವರನ್ನು ಔಟ್ ಮಾಡಿದ ಇತರೆ ಇಬ್ಬರು ಬೌಲರ್‌ಗಳು. ಶಿವನಾರಾಯಣ್ 2015ರಲ್ಲಿ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಅವರ ಮಗ ಕಳೆದ ವರ್ಷ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ್ದಾರೆ.